Home Mangalorean News Kannada News ಆಯ್ದ ಪ್ರಮುಖ ದೇವಸ್ಥಾನಗಳ ಪೂಜಾ ಪುನಸ್ಕಾರ ಆನ್‌ಲೈನ್‌ ಮೂಲಕ ನೇರ ಪ್ರಸಾರ: ಸಚಿವ ಶ್ರೀನಿವಾಸ ಪೂಜಾರಿ

ಆಯ್ದ ಪ್ರಮುಖ ದೇವಸ್ಥಾನಗಳ ಪೂಜಾ ಪುನಸ್ಕಾರ ಆನ್‌ಲೈನ್‌ ಮೂಲಕ ನೇರ ಪ್ರಸಾರ: ಸಚಿವ ಶ್ರೀನಿವಾಸ ಪೂಜಾರಿ

Spread the love

ಆಯ್ದ ಪ್ರಮುಖ ದೇವಸ್ಥಾನಗಳ ಪೂಜಾ ಪುನಸ್ಕಾರ ಆನ್‌ಲೈನ್‌ ಮೂಲಕ ನೇರ ಪ್ರಸಾರ: ಸಚಿವ ಶ್ರೀನಿವಾಸ ಪೂಜಾರಿ

ಬೆಂಗಳೂರು: ರಾಜ್ಯದ ಆಯ್ದ ಪ್ರಮುಖ ದೇವಸ್ಥಾನಗಳ ಪೂಜಾ ಪುನಸ್ಕಾರವನ್ನು ಆನ್‌ ಲೈನ್‌ ಮೂಲಕ ನೇರ ಪ್ರಸಾರ ಮಾಡಲು ಚಿಂತನೆ ನಡೆದಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಯಾ ದೇವಸ್ಥಾನಗಳ ವೆಬ್‌ಸೈಟ್ ಮತ್ತು ಫೇಸ್ ಬುಕ್ ಲೈವ್ ಮೂಲಕ‌ ನೇರ ಪ್ರಸಾರ ಮಾಡುವ ಚಿಂತನೆ ಇದೆ. 15 ಜಿಲ್ಲೆಗಳ ದೇಗುಲ ಪೂಜಾ ಪದ್ಧತಿಯನ್ನು ನೇರಪ್ರಸಾರ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು.

ಇದೇ ವೇಳೆ ಲಾಕ್‌ಡೌನ್ ಹಿನ್ನೆಲೆ ದೇವಸ್ಥಾನಗಳು ಬಂದ್ ಆಗಿರುವುದರಿಂದ ಭಕ್ತರಿಗೆ ಅನುಕೂಲವಾಗಲೆಂದು ಆನ್ ಲೈನ್ ಪೂಜೆ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದರು.

ಆಯ್ದ ದೇವಸ್ಥಾನಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗುವುದು. ಆನ್ ಲೈನ್ ಮೂಲಕ ಭಕ್ತರು ಸೇವಾ ವೆಚ್ಚ ಭರಿಸಬಹುದು. ಅವರಿಗೆ ಮನೆಗೇ ಪ್ರಸಾದ ಕಳಿಸುವ ಕೆಲಸ ಮಾಡುತ್ತೇವೆ. ಮಂಗಳಾರತಿ, ಅರ್ಚನೆ, ಪುಷ್ಪಾಲಂಕಾರ ಪೂಜೆ, ಅಷ್ಟೋತ್ತರ ಸೇರಿ 15 ಸೇವೆಗಳನ್ನು ಆನ್‌ಲೈನ್ ಮೂಲಕ ಕೊಡಲು ಉದ್ದೇಶಿಸಲಾಗಿದೆ.

ಭಕ್ತರು ಬೇಕಾದ ಸೇವೆಗೆ ಹಣ ಪಾವತಿಸಬೇಕು. ಅಂತವರ ಹೆಸರಿನಲ್ಲಿ ಪೂಜೆಯನ್ನು ನೆರವೇರಿಸಲಾಗುತ್ತದೆ. ನಂತರ ಅವರಿಗೆ ಪ್ರಸಾದವನ್ನು ಅವರ ಮನೆಗೆ ಕಳಿಸುತ್ತೇವೆ ಎಂದು ವಿವರಿಸಿದರು.

ಬೆಂಗಳೂರು ಬನಶಂಕರಿ, ಸವದತ್ತಿ ಯಲ್ಲಮ್ಮ, ಮೈಸೂರು ಚಾಮುಂಡಿ, ನಂಜನಗೂಡು ಶ್ರೀಕಂಠೇಶ್ವರ, ಕಟೀಲು ದುರ್ಗಾ ಪರಮೇಶ್ವರಿ, ಕುಕ್ಕೆ ಸುಬ್ರಮಣ್ಯ ಸೇರಿ ಹಲವು ಪ್ರಮುಖ ದೇಗುಲಗಳಲ್ಲಿ ಪೂಜೆಯ‌ ನೇರ ಪ್ರಸಾರ ಹಾಗೂ ಆನ್ ಲೈನ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಮೇ ತಿಂಗಳಾಂತ್ಯಕ್ಕೆ ಈ ಆನ್ ಲೈನ್ ಪೂಜೆ ಮತ್ತು ನೇರ ಪ್ರಸಾರದ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಅರ್ಚಕರಿಗೆ ಸಾಕಷ್ಟು ಸಮಸ್ಯೆಯಿದೆ. ಹೀಗಾಗಿ ಮೂರು ತಿಂಗಳ ತಸ್ತೀಕ್ ಬಿಡುಗಡೆಗೆ ಮನವಿ ಮಾಡಿದ್ದರು. ಮುಖ್ಯಮಂತ್ರಿ ಸೂಚನೆ ಮೇರೆಗೆ 33.66 ಕೋಟಿ ರೂ. ಹಣ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದರು.
ಈಗಾಗಲೇ ಆರ್ಥಿಕ ಇಲಾಖೆ ಹಣವನ್ನು ಬಿಡುಗಡೆ ಮಾಡಿದೆ. 29,700 ದೇಗುಲಗಳ ಅರ್ಚಕರಿಗೆ ಮೂರು ತಿಂಗಳ ತಸ್ತೀಕ್ ಬಿಡುಗಡೆ ಮಾಡಲಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ದೇಗುಲಗಳ ಪ್ರಾರಂಭಕ್ಕೆ ಅರ್ಚಕರು ಮನವಿ ಮಾಡಿದ್ದಾರೆ. ಅವರು ತಟ್ಟೆಯ ಕಾಸನ್ನೇ ನಂಬಿಕೊಂಡಿದ್ದಾರೆ. ಲಾಕ್ ಡೌನ್ ನಿಂದ ಅವರಿಗೆ ಸಮಸ್ಯೆಯಾಗಿದೆ. ಅವರಿಗೆ ಕಿಟ್ ವಿತರಣೆಯನ್ನೂ ಮಾಡ್ತಿದ್ದೇವೆ. ದೇಗುಲ ಪ್ರಾರಂಭವಾದರೆ ಅವರ ಸಮಸ್ಯೆಗಳು ಬಗೆಹರಿಯುತ್ತವೆ. ಹೀಗಾಗಿ ಅವರು ದೇಗುಲ ಪ್ರಾರಂಭಕ್ಕೆ ಒತ್ತಾಯಿಸಿದ್ದಾರೆ. ಆದರೆ ಇದೀಗ ನಾವು ಅವಕಾಶ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.


Spread the love

Exit mobile version