ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ನ ಹಿರಿಯ ಪ್ರಚಾರಕ ನ. ಕೃಷ್ಣಪ್ಪ ಅವರು ನಿಧನರಾಗಿದ್ದಾರೆ.
ಕ್ಯಾನ್ಸರ್ ಜಯಿಸಿ ಕಳೆದ ಹಲವಾರು ವರ್ಷಗಳಿಂದ ಸಾಮಾನ್ಯರಂತೆ ಬದುಕು ಸಾಗುತ್ತಿದ್ದರು.
ಬರೋಬ್ಬರಿ 61 ವರ್ಷಗಳ ಕಾಲ ಆರ್ಎಸ್ಎಸ್ ಪ್ರಚಾರಕರಾಗಿ ಸೇವೆ ಸಲ್ಲಿಸಿರುವ ಕೃಷ್ಣಪ್ಪ ಅವರು ಸೋಮವಾರ ಬೆಳಗ್ಗೆ ನಿಧನರಾಗಿರುವ ಸಂಗತಿಯನ್ನು ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ. ಅವರ ನಿವಾಸ ಕೇಶವ ಕೃಪಾದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ 12.30ರಿಂದ 4 ಗಂಟೆಯ ತನಕ ಇಡಲಾಗುತ್ತಿದೆ. ಬಳಿಕ ಅವರ ದೇಹವನ್ನು ಕಿಮ್್ಸ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗುತ್ತದೆ.
1932ರಲ್ಲಿ ಮೈಸೂರಿನಲ್ಲಿ ಜನಿಸಿದ ನ. ಕೃಷ್ಣಪ್ಪ ಅವರು ನರಸಿಂಹಯ್ಯ ಮತ್ತು ಸಾವಿತ್ರಮ್ಮ ದಂಪತಿಯ ದ್ವಿತೀಯ ಪುತ್ರರಾಗಿದ್ದರು. ಸಂಸ್ಕೃತದಲ್ಲಿ ಪದವಿ ಪಡೆದಿದ್ದ ಕೃಷ್ಣಪ್ಪನವರು ಕಾಲೇಜು ದಿನಗಳಲ್ಲೇ ಆರ್ಎಸ್ಎಸ್ನ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಂಘ ಪರಿವಾರ ಪ್ರಚಾರ ಕಾರ್ಯದಲ್ಲಿನ ಸಾಕಷ್ಟು ಬದಲಾವಣೆಯಲ್ಲಿ ಕೃಷ್ಣಪ್ಪ ಅವರದ್ದು ವಿಶೇಷ ಪಾತ್ರವಿದೆ. ಕುತುಬ್ ಪ್ರಬೋಧನ್ ಹೆಸರಿನಲ್ಲಿ ಶಿಕ್ಷಣ ನೀಡುವ ವಿಶೇಷ ಕಾಯಕ್ರಮದ ಮೂಲಕ ಮೆಚ್ಚುಗೆ ಗಳಿಸಿಕೊಂಡಿದ್ದರು.
*****
ಇನ್ನಷ್ಟು ವಿವರ:
* 1954ರಲ್ಲಿ ಆರ್ಎಸ್ಎಸ್ ಪ್ರಚಾರಕರಾಗಿ ಸೇವೆ ಆರಂಭಿಸಿದರು. ಚಾಮರಾಜನಗರದ ತಾಲೂಕಾ ಪ್ರಚಾರಕ ಜವಾಬ್ದಾರಿ ಹೊತ್ತುಕೊಂಡರು.
* 1955-56ರಲ್ಲಿ ಶಿವಮೊಗ್ಗ ಜಿಲ್ಲಾ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ.
* 1959ರಲ್ಲಿ ಮಂಗಳೂರು ಜಿಲ್ಲಾ ಪ್ರಚಾರಕರಾಗಿ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.
* 1960ರಿಂದ 1962ರ ತನಕ ಬೆಂಗಳೂರು ಜಿಲ್ಲಾ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ.
* 1962ರಲ್ಲಿ ತುಮಕೂರು ವಿಭಾಗ ಪ್ರಚಾರಕರಾಗಿ ಸೇವೆ.
* 1966ರಲ್ಲಿ ಮಂಗಳೂರು ವಿಭಾಗ ಪ್ರಚಾರಕರಾಗಿ, ನಂತರದ ದಿನದಲ್ಲಿ ಮಂಗಳೂರು ವಿಭಾಗವನ್ನು ಬಳ್ಳಾರಿಗೂ ವಿಸ್ತರಿಸಿದ ಸಂದರ್ಭದಲ್ಲೂ ನಾಯಕನಂತೆ ನಿಂತು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
* 1975ರ ತುರ್ತು ಪರಿಸ್ಥಿತಿಯಲ್ಲಿ ಮಂಗಳೂರು ವಿಭಾಗದಲ್ಲಿ ವಿಶೇಷವಾದ ಆಸಕ್ತಿ ತೋರಿ ಸೇವೆ ಸಲ್ಲಿಸಿ ಮೆಚ್ಚುಗೆ ಗಳಿಸಿಕೊಂಡರು. ದೇಶವೇ ಗಮನಹರಿಸುವಂಥ ಪ್ರತಿಭಟನೆಯ ನೇತೃವ ವಹಿಸಿಕೊಂಡು ಕೆಲಸ ಮಾಡಿದರು. ಜೈಲುವಾಸವನ್ನು ಅನುಭವಿಸಿದರು.
* 1978ರಲ್ಲಿ ಪ್ರಾಂತ ಬೌದ್ಧಿಕ್ ಪ್ರಮುಖ್ ಹುದ್ದೆಯ ಜವಾಬ್ದಾರಿ ಹೊತ್ತುಕೊಂಡರು.
* 1980ರಲ್ಲಿ ಕರ್ನಾಟಕ ರಾಜ್ಯದ ಪ್ರಾಂತ ಬೌದ್ಧಿಕ್ ಪ್ರಮುಖ್ ಆಗಿ ಸೇವೆ ಸಲ್ಲಿಸಿದರು.
* 1989ರಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಕ್ಷೇತ್ರೀಯ ಪ್ರಚಾರಕರಾಗಿ ನೇಮಕಗೊಂಡರು.
* 2004ರಲ್ಲಿ ಆರ್ಎಸ್ಎಸ್ನ ಅಖಿಲ ಭಾರತೀಯ ಕಾರ್ಯಕಾರಣಿ ಸದಸ್ಯರಾಗಿ, 2014ರ ತನಕವೂ ಸೇವೆ ಸಲ್ಲಿಸಿದ್ದಾರೆ.
* ಕಳೆದ ಮಾರ್ಚ್ನಿಂದ ಅನಾರೋಗ್ಯ ಸಮಸ್ಯೆ ಕಾಡಲಾರಂಭಿಸಿತು. ಕೆಲ ತಿಂಗಳಿಂದಲೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.