ಆರ್. ಎಸ್. ಎಸ್. ಕಾರ್ಯಕರ್ತನ ಹಲ್ಲೆ; ಜಿಲ್ಲೆಯ ಕಾನೂನು ವ್ಯವಸ್ಥೆ ವಿಫಲ – ಕ್ಯಾ. ಕಾರ್ಣಿಕ್
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಅಮಾಯಕರ ಮೇಲೆ ಹಲ್ಲೆಗೈಯ್ಯುವುದು, ಇರಿತಕ್ಕೆ ಒಳಪಡಿಸುವುದು ಹಾಗೂ ಕೊಲೆ ಮಾಡುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಬಂಟ್ವಾಳ ಹಾಗೂ ಕಲ್ಕಡ್ಕ ಪ್ರದೇಶದಲ್ಲಿ ಮುಂದುವರೆದಿದ್ದು, ಜುಲೈ 4 ರ ರಾತ್ರಿ ಎಂದಿನಂತೆ ತನ್ನ ಲಾಂಡ್ರಿ ಅಂಗಡಿಯನ್ನು ಬಂದ್ ಮಾಡಿ ಮನೆಗೆ ತೆರಳುತ್ತಿದ್ದ ಶರತ್ ಎನ್ನುವ ಅಮಾಯಕ ಆರ್.ಎಸ್.ಎಸ್ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಬಿಗಿ ಪೋಲಿಸ್ ಬಂದೋಬಸ್ತು ಹಾಗೂ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಒಂದು ಸಮುದಾಯದವರನ್ನು ಗುರಿಯಾಗಿಸಿ ಅಮಾಯಕರ ಮೇಲೆ ಪ್ರಾಣಾಂತಿಕ ಹಲ್ಲೆ ನಡೆಸಿರುವುದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿರುವುದಕ್ಕೆ ಹಿಡಿದ ಕೈಗನ್ನಡಿ, ಹಲ್ಲೆಕೋರರನ್ನು ಕೂಡಲೇ ಬಂಧಿಸಿ ಅವರ ಮೇಲೆ ತೀವ್ರ ಕಾನೂನು ಕ್ರಮಕೈಗೊಳ್ಳುವಂತೆ ಸರ್ಕಾರವನ್ನು ವಿಧಾನಪರಿಷತ್ ವಿರೋಧ ಪಕ್ಷ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.
ಈ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಿ ತಿಂಗಳು ಕಳೆದಿದ್ದರೂ ಇನ್ನೂ ಪರಿಸ್ಥಿತಿ ಶಮನ ಮಾಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಒಂದು ಸಮುದಾಯದ ತುಷ್ಟೀಕರಣದ ಮೂಲಕ ಪೋಲಿಸರಿಗೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಬಿಡದೆ ಉಸ್ತುವಾರಿ ಸಚಿವರ ಕೈಗೊಂಬೆ ಮಾಡಿಕೊಂಡಿರುವುದು ದುಷ್ಕರ್ಮಿಗಳಿಗೆ ವರದಾನವಾಗಿ ಪರಿಣಮಿಸಿದೆ. ಹಿಂದೂಗಳು ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದು, ಸಾರ್ವಜನಿಕರು ಇಲಾಖೆಯ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ದುಷ್ಕರ್ಮಿಗಳನ್ನು ಬಂಧಿಸುವಂತೆ ಹಾಗೂ ಗಂಭೀರವಾಗಿ ಗಾಯಗೊಂಡಿರುವ ಅಮಾಯಕ ಶರತ್ ಚಿಕಿತ್ಸೆಗೆ ಸೂಕ್ತ ನೆರವು ನೀಡುವಂತೆ ಇಂತಹ ಘಟನೆಗಳು ಮರುಕಳಿಸಿದಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದಿದ್ದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ನಾಗರಿಕರು ರೊಚ್ಚಿಗೆದ್ದು ಬೀದಿಗೀಳಿದು ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾದಲ್ಲಿ ಇದಕ್ಕೆ ಸಂಪೂರ್ಣವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಹಾಗೂ ಸರ್ಕಾರವೇ ಹೊಣೆಯಾಗಬೇಕಾಗಿದು ಎಂದು ಕಾರ್ಣಿಕ್ ಎಚ್ಚರಿಸಿದ್ದಾರೆ