ಆಳ್ವಾಸ್ ನುಡಿಸಿರಿ-2016 ಸಜ್ಜುಗೊಂಡ ಮೂಡಬಿದರೆ
ಮೂಡುಬಿದಿರೆ: ಸಾಹಿತ್ಯಕ, ಸಾಂಸ್ಕೃತಿಕ ರಾಷ್ಟ್ರೀಯ ಸಮ್ಮೇಳನ ನುಡಿಜಾತ್ರೆ 13ನೆ ವರ್ಷದ “ಆಳ್ವಾಸ್ ನುಡಿಸಿರಿ’ ನ.18ರಿಂದ ಆರಂಭಗೊಳ್ಳಲಿದೆ. ಮೂರು ದಿನಗಳ ಕಾಲ ಹಲವು ಸಿರಿಗಳ ಕೂಡುವಿಕೆಯಲ್ಲಿ “ಕರ್ನಾಟಕ: ನಾಳೆಗಳ ನಿರ್ಮಾಣ’ ಎಂಬ ಪರಿಕಲ್ಪನೆಯೊಂದಿಗೆ ಅನಾವರಣಗೊಳ್ಳಲಿದೆ. ಮೂಡುಬಿದಿರೆಯ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯ ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ಖ್ಯಾತ ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕಿ ಡಾ.ಬಿ.ಎನ್. ಸುಮಿತ್ರಾಬಾಯಿ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದ್ದು, ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಸಾಹಿತ್ಯ, ಸಂಸ್ಕೃತಿ, ಭಾಷೆ, ಸಮಾಜ, ನೆಲ-ಜಲ, ಆರೋಗ್ಯ-ಆಹಾರ, ಸಂಸ್ಮರಣೆ, ಹಿರಿಯರ ಸ್ಮರಣೆ, ನಮ್ಮ ಕತೆ ನಿಮ್ಮ ಜೊತೆ ಮುಂತಾದುವುಗಳ ಕುರಿತು ಚಿಂತನ-ಮಂಥನ ನಡೆಯಲಿದೆ.
ವಿದ್ಯಾರ್ಥಿ ಸಿರಿ ಸಮಾರೋಪ: ಆಧುನಿಕತೆಯ ಒಲವು ಬೇಡ, ಕೃಷಿ ಪ್ರೀತಿ ಮೆರೆಯಿರಿ
ಮೂಡುಬಿದಿರೆ: ಯುವಜನರು ಪರಿಸರ ಪ್ರೇಮವನ್ನು ಬೆಳೆಸಿಕೊಂಡು ಪ್ರಕೃತಿಯನ್ನು ಉಳಿಸಬೇಕು ಎಂದು ಪ್ರಬಲವಾಗಿ ಆಗ್ರಹಿಸಿದವರು ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಶ್ಮಿತಾ ಕೆ. ರೈ.
ವಿದ್ಯಾರ್ಥಿ ಸಿರಿಯನ್ನು ಸಮಾರೋಪಗೊಳಿಸಿ ಮಾತನಾಡಿದ ಅವರು, ಆಧುನಿಕ ಜೀವನಶೈಲಿಗೆ ಮಾರು ಹೋಗಿ ಮಾನವೀಯತೆ ಮರೆಯುತ್ತಿರುವುದರ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದರು. ಜಾಗತೀಕರಣದ ಪರಾಕಾಷ್ಠೆಯ ನಡುವೆ ಭೂಮಿ ನಾಶವಾಗುತ್ತಿದೆ. ಇದರಿಂದಾಗಿ ರೈತರು ಧನಾತ್ಮಕವಾಗಿ ಯೋಚಿಸುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಅದರ ಫಲಿತವೇ ರೈತರ ಆತ್ಮಹತ್ಯೆಯ ಹೆಚ್ಚಳ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇದನ್ನು ತಡೆಯುವ ಶಕ್ತಿಗಳೇ ಯುವಜನರು. ಕೃಷಿ ಪ್ರೀತಿಯನ್ನು ತಾವೂ ಬೆಳೆಸಿಕೊಂಡು ಇತರರಿಗೂ ಪಸರಿಸುವ ಕಾಳಜಿ ತೋರಿಸಬೇಕು ಎಂದು ಹೃದಯತಟ್ಟುವಂತೆ ಮನವಿ ಮಾಡಿದರು.
ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತು ಹೊರಳಿಸಿದ ಸುಶ್ಮಿತಾ, ಅಂಕಗಳಿಕೆಯ ಶಿಕ್ಷಣ ವ್ಯವಸ್ಥೆಗೆ ಸೀಮಿತವಾಗುವುದರಿಂದಾಗಿ ನಮ್ಮೊಳಗೆ ಆತ್ಮವಿಶ್ವಾಸದ ಕೊರತೆ ಕಾಡುತ್ತಿದೆ. ಇದರಿಂದಾಗಿಯೇ ಹಲವಾರು ಸಮಸ್ಯೆಗಳು ಒಂದರ ಬೆನ್ನ ಹಿಂದೆ ತೆರೆದುಕೊಳ್ಳುತ್ತ ಸಾಗುತ್ತದೆ. ಬಹಿರಂಗದಲ್ಲಿ ಗೆಲುವು, ಅಂತರಂಗದ ಸೋಲನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಮುಖ್ಯವಾಗಿ ಬೇಕಿರುವುದು ಕಲಿಕೆಯೊಂದಿಗೆ ಸಾಹಿತ್ಯ, ಸಂಸ್ಕøತಿಯ ಪ್ರೀತಿ ಎಂದು ಒತ್ತಾಸೆಯಾದರು.
ಅನನ್ಯ ಪ್ರತಿಜ್ಞೆ
ನಾವು ವಿದ್ಯಾವಂತಾರುವುದರ ಜತೆಗೆ ವಿಚಾರವಂತಾರಾಗುತ್ತೇವೆ, ಆಚಾರವಂತರಾಗುತ್ತೇವೆ. ಕಲೆ, ಸಂಸ್ಕøತಿ ಪ್ರೀತಿಯೊಂದಿಗೆ ಸತ್ಚಾರಿತ್ರ್ಯದೊಂದಿಗೆ ಬಾಳಿ, ಭ್ರಷ್ಟಾಚಾರಮುಕ್ತ, ಕೋಮು ಸಾಮರಸ್ಯದ ಸಮಾಜವನ್ನು ನಿರ್ಮಿಸುತ್ತೇವೆ ಎಂದು ಪ್ರಮಾಣ ಮಾಡುತ್ತೇನೆ. ನುಡಿದಾಯಿತು, ಅಂತೆಯೇ ನಡೆಯುವ ಜವಾಬ್ದಾರಿ ನಮ್ಮದು ಎಂದು ಡಾ. ಆಳ್ವರ ಸಮ್ಮುಖ ಸಮಸ್ತ ವಿದ್ಯಾರ್ಥಿಸ್ತೋಮದ ಪರವಾಗಿ ಪ್ರತಿಜ್ಞೆ ಕೈಗೊಂಡು ಸಂಚಲನ ಮೂಡಿಸಿದವರು ಸರ್ವಾಧ್ಯಕ್ಷೆ ಅನನ್ಯಾ.
ಇಬ್ಬರೂ ನುಡಿಸಿರಿಯ ಅಂದ ಚಂದಕ್ಕೆ, ಸಾರ್ಥಕತೆಯನ್ನು ಕೊಂಡಾಡಿ ಪರಿಕಲ್ಪನೆಯ ಸಾಕಾರಮೂರ್ತಿ ಡಾ. ಆಳ್ವರಿಗೆ ಧನ್ಯವಾದ ಸಲ್ಲಿಸಿದರು.
ವಿದ್ಯಾರ್ಥಿಗಳ ಪ್ರತಿಭೆ, ಸ್ಪಷ್ಟತೆ, ಪ್ರಬುದ್ಧತೆ ನಾಳೆಗಳಿಗೆ ಸುಂದರ ದೀವಿಗೆಯಾಗಿದೆ. ಇದೇ ಪ್ರತಿಭೆಗಳನ್ನಿಟ್ಟುಕೊಂಡೇ ನುಡಿಸಿರಿಯನ್ನೂ ನಡೆಸಬೇಕಿದೆ. ಈ ಮಕ್ಕಳೆಲ್ಲ ಬೆಳೆಯುತ್ತಾರೆ, ಕೀರ್ತಿವಂತರಾಗುತ್ತಾರೆ ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ. ನಾಳೆ ಆರಂಭಗೊಳ್ಳುವ ನಾಳೆಯ ಕರ್ನಾಟಕ: ನಾಳೆಗಳ ನಿರ್ಮಾಣದ ಆಶಯದ ನುಡಿಸಿರಿಯೂ ನಿಮ್ಮದೇ ಎಂದು ಆಮಂತ್ರಿಸಿ ಕೃತಜ್ಞತೆ ಹೇಳಿದವರು ನುಡಿಸಿರಿಯ ಪರಿಕಲ್ಪನೆಯ ನೇತಾರ ಅನುರೂಪ ಸಂಘಟಕ ಶಿಕ್ಷಣ ಕಲಾ ತಜ್ಞ ಡಾ. ಮೋಹನ ಆಳ್ವ ಅವರು.
ಆಶ್ರಿತಾ ಸ್ವಾಗತಿಸಿದರು. ಫಾತಿಮತ್ ಝೊಹರಾ ವಂದಿಸಿದರು. ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪದ ಬಳಿಕ ಸುದರ್ಶನ ವಿಯ ಯಕ್ಷಗಾನ ವೈಭವವನ್ನು ಪ್ರಸ್ತುತಪಡಿಸಿದರು ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಪ್ರೌಢ ಶಾಲಾ ವಿದ್ಯಾರ್ಥಿಗಳು. ಗಂಡುಮೆಟ್ಟಿನ ಕಲೆಯನ್ನು ಈ ಪುಟಾಣಿಗಳು ಹಿರಿಯ ಕಲಾವಿದರಿಗೆ ಪೈಪೋಟಯೋ ಅನ್ನುವಂತೆ ರಂಗದಲ್ಲಿ ನಿರೂಪಿಸಿದರು. ಚಂಡೆಯ ಅಲೆ, ಬಣ್ಣದ ವೇಷದ ಆರ್ಭಟ, ಹುಡಿಯೆಬ್ಬಿಸುವ ಕುಣಿತ ಯಕ್ಷಲೋಕವಾಗಿ ರತ್ನಾಕರವರ್ಣಿ ವೇದಿಕೆ ಮಾರ್ಪಟ್ಟು ಇದುವರೆಗಿನ ಲಯಗಾರಿಕೆಯ ನಯನಹ ಮನೋಹರ, ಮನತಟ್ಟುವ ವೈವಿಧ್ಯ ಸಾಂಸ್ಕøತಿಕ ಕಾರ್ಯಕ್ರಮಗಳ ಬಳಿಕ ಹೊಸತೊಂದು ಅನುಭವವನ್ನು ಉಣಿಸಿತು.
ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೇಯಾ ಪೈ ಕಾರ್ಯಕ್ರಮ ನಿರೂಪಿಸಿದರು.
ಡಾ. ಮೋಹನ ಆಳ್ವರ ಅವರು ಎಲ್ಲ ಅತಿಥಿಗಳಿಗೂ, ವಿದ್ಯಾರ್ಥಿ ಕಲಾವಿದರಿಗೂ ಸ್ಮರಣಿಕೆ ನೀಡಿ ಗೌರವಿಸಿದರು.