ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

Spread the love

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಮಿಜಾರು: `ಇಂಜಿನಿಯರಿಂಗ್ ಎಂಬುದು ತುಂಬಾ ಸೃಜನಶೀಲ ಕ್ಷೇತ್ರ. ಇಂಜಿನಿಯರ್‍ಗಳಾದವರು ತಮ್ಮ ಸ್ಪೆಶಲೈಸೇಶನ್‍ಗಳಿಗೆ ಸೀಮಿತರಾಗದೇ ಈ ವಿಸ್ತಾರ ಕ್ಷೇತ್ರದ ಎಲ್ಲಾ ಆಯಾಮಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ನಾವು ಕಲಿತ ವಿಷಯಗಳಿಗಿಂತ ವಿಭಿನ್ನವಾದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅಂತಹ ಯಾವುದೇ ಸಂದರ್ಭ ಬಂದರೂ ಅದನ್ನು ಸ್ವೀಕರಿಸಿ ಅದರಲ್ಲಿ ನಮ್ಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸುವ ಅಗತ್ಯತೆ ಇರುತ್ತದೆ’ ಎಂದು ಸುರತ್ಕಲ್ ಎನ್‍ಐಟಿಕೆಯ ನಿರ್ದೇಶಕ ಡಾ.ಕರನಂ ಉಮಾಮಹೇಶ್ವರ ಹೇಳಿದರು.

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಶನ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಿಂದ ನಡೆಯುತ್ತಿರುವ `ಲೇಸರ್ ಡಿಪೆÇಸಿಟೆಷನ್: ನ್ಯಾನೋ ಸ್ಟ್ರಕ್ಚರ್, ಹೆಟೆರೋಸ್ಟ್ರಕ್ಚರ್ ಮತ್ತು 2ಡಿ ಲೇಯರ್ಸ್’ ( ಐಕ್ಲೌಡ್ – 2019) ಮೂರು ದಿನಗಳ ಅಂತರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ತಮ್ಮ ವೈಯಕ್ತಿಕ ಜೀವನದ ಉದಾಹರಣೆಗಳನ್ನು ನೀಡಿದ ಅವರು, ಇಂದಿನ ಸಮಾಜಕ್ಕೆ ಪರಿಣಾಮಕಾರಿಯಾದ ಯೋಜನೆಗಳ ಅಗತ್ಯತೆ ಇದೆ. ಅದಕ್ಕಾಗಿ ಇಂಜಿನಿಯರ್‍ಗಳಾದವರು ಯಾವುದೇ ಕ್ಷೇತ್ರದಲ್ಲಿದ್ದರೂ, ಯಾವುದೇ ಯೋಜನೆಗಳನ್ನು ಮಾಡಿದರೂ ಅದು ಮಿತವ್ಯಯದ್ದಾಗಿದ್ದು ಸಮಾಜಕ್ಕೆ ಉತ್ತಮ ಫಲವನ್ನು ನೀಡುವಂತಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್‍ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, `ಅಂತರಾಷ್ಟ್ರೀಯ ಸಮ್ಮೇಳನಗಳ ಆಯೋಜನೆಯ ಉದ್ದೇಶವನ್ನು ವಿದ್ಯಾರ್ಥಿಗಳು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಇಲ್ಲಿ ಬರುವ ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ಜ್ಞಾನವನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೆಯೇ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕೈಗೊಳ್ಳುವ ಕ್ರಿಯಾತ್ಮಕ ಯೋಜನೆಗಳು ಸಮಾಜದಲ್ಲಿರುವ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವಂತಿರಬೇಕು’ ಎಂದು ತಿಳಿಸಿದರು. ಈ ರೀತಿಯ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳು ಮೂಡುಬಿದಿರೆಯಂತಹ ಗ್ರಾಮೀಣ ಪ್ರದೇಶಗಳಲ್ಲಿ ಆಯೋಜನೆಗೊಳ್ಳುತ್ತಿರುವುದು ಸಂತಸದ ವಿಚಾರ. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ದೊಡ್ಡ ವೇದಿಕೆಯನ್ನು ಕಲ್ಪಿಸಬಲ್ಲವು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮದ್ರಾಸ್ ಐಐಟಿಯ ಡಾ. ಎಮ್.ಎಸ್. ರಾಮಚಂದ್ರರಾವ್, ಜರ್ಮನಿಯ ಕೊಹೆರೆಂಟ್ ಲೇಸರ್ ಸಿಸ್ಟಮ್‍ನ ಬುರ್ಕಾಡ್ ಫೆಚ್ನರ್ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫರ್ನಾಂಡಿಸ್ ಉಪಸ್ಥಿತರಿದ್ದರು. ವಿಚಾರ ಸಂಕಿರಣದ ಆಯೋಜನ ಸಮಿತಿಯ ಮುಖ್ಯಸ್ಥ ಡಾ.ರಿಚರ್ಡ್ ಪಿಂಟೋ ಸ್ವಾಗತಿಸಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ತಾನಿಯಾ ಮೆಂಡಿಸ್ ನಿರೂಪಿಸಿದರು. ವಿಚಾರ ಸಂಕಿರಣದ ಸಂಯೋಜಕ ಡಾ.ಜಯರಾಮ್ ವಂದಿಸಿದರು.

ವಿಚಾರ ಸಂಕಿರಣದ ವಿಶೇಷತೆ
ಐಐಟಿ ಮದ್ರಾಸ್ ಸಹಯೋಗದೊಂದಿಗೆ ನಡೆಯುತ್ತಿರುವ ಈ ವಿಚಾರ ಸಂಕಿರಣಕ್ಕೆ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ರಿಸರ್ಚ್ ಬೋರ್ಡ್, ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಲೇಸರ್ ಸೈನ್ಸ್ ಸರ್ವೀಸ್ ಪ್ರೈ.ಲಿ. ಸಹಕಾರ ನೀಡಿವೆ. ಸಮ್ಮೇಳನವು ವಿಭಿನ್ನ ವೈಜ್ಞಾನಿಕ ಮತ್ತು ತಾಂತ್ರಿಕ ಅವಧಿಗಳನ್ನು ಹೊಂದಿದೆ. ಸಿಎನ್‍ಅರೆಸ್ ಯುಎಂಆರ್, ಫ್ರಾನ್ಸ್, ಕುಮಾಮೊಟೊ ವಿಶ್ವವಿದ್ಯಾಲಯ-ಜಪಾನ್ ಕೇಂದ್ರ ಸಂಸ್ಥೆಗಳಾದ ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಟಿ ಹೈದರಾಬಾದ್, ಐಐಎಸ್‍ಆರ್-ಪುಣೆ, ಕುಸಾಟ್-ಕೊಚ್ಚಿನ್, ಐಐಎಸ್‍ಆರ್-ತಿರುವನಂತಪುರ, ಡಾಯಟ್ -ಪುಣೆ, ಎನ್‍ಐಟಿ ಕ್ಯಾಲಿಕಟ್, ಎನ್‍ಐಟಿಕೆ ಸುರತ್ಕಲ್ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಸಿದ್ಧ ವಿಜ್ಞಾನಿಗಳಿಂದ 4 ಮುಖ್ಯ ಭಾಷಣ, 3 ಸಮಗ್ರ ಮಾತುಕತೆ ಮತ್ತು 23 ಆಹ್ವಾನಿತ ಉಪನ್ಯಾಸಗಳು ನಡೆಯಲಿದೆ. ಪ್ರಪಂಚದಾದ್ಯಂತದ ಸಂಶೋಧಕರ 70 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆಗೊಳ್ಳಲಿವೆ.


Spread the love