ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಮಣಿಪುರ ರಾಜ್ಯಪಾಲರ ಭೇಟಿ
ಮೂಡುಬಿದಿರೆ: ಶಿಕ್ಷಣದಿಂದ ಜ್ಞಾನದ ವೃದ್ಧಿಯಾಗುತ್ತದೆ. ಸಾಮಾಜಿಕ ಶಕ್ತಿಯ ಬಲವರ್ಧನೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗದ ಸೃಷ್ಟಿಕರ್ತರಾಗಬೇಕೇ ಹೊರತು ಉದ್ಯೋಗಾಂಕ್ಷಿಗಳಾಗಬಾರದು. ಸರ್ವ ಧರ್ಮ ಸಮ ಭಾವನಾ ತತ್ವ ಮುಖೇನ ಒಗ್ಗಟ್ಟಿನಿಂದ ದೇಶದ ಸೇವೆ ಮಾಡಬೇಕು. ಶಿಕ್ಷಣ ಪಡೆಯುವುದರೊಂದಿಗೆ ಸಶಕ್ತ ಭಾರತದ ನಿರ್ಮಾಣವಾಗಬೇಕೆಂದು ಮಣಿಪುರದ ರಾಜ್ಯಪಾಲ ಡಾ. ಪಿ.ಬಿ ಆಚಾರ್ಯ ಹೇಳಿದರು.
ಮೂಡುಬಿದಿರೆಯ ಮಿಜಾರಿನಲ್ಲಿರುವ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿದ ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಆಳ್ವಾಸ್ ಕಾಲೇಜಿನಲ್ಲಿ ಹಲವು ರಾಜ್ಯಗಳ ವಿದ್ಯಾರ್ಥಿಗಳಿದ್ದು ಇದರಿಂದ ಸಂಸ್ಕೃತಿ ಆಚರಣೆಗಳ ವಿನಿಮಯ ಸಾಧ್ಯ. ವಿದ್ಯಾರ್ಥಿಗಳು ಹೊಸತನಕ್ಕೆ ಮಾರು ಹೋದಂತೆ ಮಾತೃಭಾಷೆಯನ್ನು ಮರೆಯಬಾರದು. ಭಾರತವು ಹಳ್ಳಿಗಳ ದೇಶವಾದ್ದರಿಂದ ಉನ್ನತ ಶಿಕ್ಷಣದ ಬಳಿಕ ತಮ್ಮ ಗ್ರಾಮಗಳ ಬೆಳವಣಿಗೆ ಸಹಕರಿಸಿದಾಗ ಮಾತ್ರ ಬಡತನದಂತಹ ತೊಂದರೆಗಳು ದೂರವಾಗಿ ಸದೃಢ ಭಾರತದ ಉಗಮವಾಗುತ್ತದೆ ಎಂದು ಅವರು ಹೇಳಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿಯು ಒಂದು ಪ್ರದೇಶದ ಹಿರಿಮೆ. ಹಲವು ವ್ಯಕ್ತಿತ್ವಗಳ ಪರಿಚಯದಿಂದ ಹೊಸ ವಿಚಾರಗಳ ಪರಿಚಯ ಸಾಧ್ಯ ಎಂದು ಹೇಳಿದರು.
ಡಾ. ಪಿ.ಬಿ ಆಚಾರ್ಯ ಪ್ರಶಸ್ತಿ ಪಡೆದ ವಿದ್ಯಾರ್ಥಿನಿಯರಾದ ತನಿಯಾ ಮತ್ತು ಪ್ರಿಯಾಕುಮಾರಿ ತಮ್ಮ ಅನುಭವವನ್ನು ಹಂಚಿಕೊಂಡರು. ಸಂಸ್ಥೆಗೆ ಭೇಟಿ ನೀಡಿದ ರಾಜ್ಯಪಾಲರಿಗೆ ಮತ್ತು ಅವರ ಪತ್ನಿ ಕವಿತಾ ಆಚಾರ್ಯ ಅವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಮಣಿಪುರದ ವಿದ್ಯಾರ್ಥಿನಿ ಮೃದಾನಿ ಕನ್ನಡ ಭಾಷೆಯಲ್ಲಿ ಸ್ವಾಗತಿಸಿದರು. ವಿದ್ಯಾರ್ಥಿನಿ ಗ್ರೇಸಿ ಕಾರ್ಯಕ್ರಮ ನಿರೂಪಿಸಿದರು.