ಆಳ್ವಾಸ್ ಇಂಜಿನಿಯರ್ ಕಾಲೇಜಿನಲ್ಲಿ ಎರಡು ದಿನದ ಎಫ್‍ಡಿಪಿ ಕಾರ್ಯಗಾರ
ಮೂಡುಬಿದಿರೆ: ಕೇವಲ ಪುಸ್ತಕ ಜ್ಞಾನವು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ಸಾಲದು. ಅದರ ಹೊರತಾಗಿ ಪುಸ್ತಕಗಳಿಂದ ಪಡೆದ ಜ್ಞಾನವನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವುದರಿಂದ ಯಶಸ್ಸು ಸಾಧ್ಯ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ಟೆಕ್ನಲಾಜಿಕಲ್ ವಿವಿಯ ವಿಶೇಷಾಧಿಕಾರಿ ಡಾ. ಶಿವಯೋಗಿ. ಬಿ ಉಳ್ಳಾಗಡ್ಡಿ ಹೇಳಿದರು.
ಉಪನ್ಯಾಸಕರು ತಮ್ಮಲ್ಲಿನ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚುಕೊಳ್ಳುವುದರ ಜತೆಗೆ ಪ್ರಸ್ತುತ ಕಾಲದ ತಂತ್ರಜ್ಞಾನ ಹಾಗೂ ಆವಿಷ್ಕಾರದ ಕುರಿತು ಮಾಹಿತಿಯನ್ನು ಹೊಂದಿರಬೇಕು. ಅಲ್ಲದೆ ವಿದ್ಯಾರ್ಥಿಗಳಲ್ಲಿ ಅವಲೋಕನದ ಜ್ಞಾನವನ್ನು ಹೆಚ್ಚಿಸಬೇಕು. ಪ್ರಕೃತಿಯು ಅನೇಕ ವಿಷಯಗಳನ್ನು ಕಲಿಸುತ್ತದೆ. ಅವುಗಳನ್ನು ಅವಲೋಕಿಸಿ ಕಲಿಯುವ ಮನೋಭಾವ ನಮ್ಮದಾಗಿರಬೇಕು. ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚುವಾಗ ಅದರ ಕುರಿತು ಉಪನ್ಯಾಸಕರು ಆಳವಾದ ಜ್ಞಾನ ಸಂಪಾದಿಸಿಕೊಂಡಿರಬೇಕು ಎಂದು ಹೇಳಿದರು.
ವಿಜ್ಞಾನಿ ನ್ಯೂಟನ್ ಹೇಗೆ ಹಲವಾರು ಸಿದ್ಧಾಂತಗಳನ್ನು ಪ್ರತಿಪಾದಿಸಿ ಕೊನೆಗೆ ಜನಪ್ರಿಯತೆಯನ್ನು ಪಡೆದರೊ, ನಾವು ಜೀವನದಲ್ಲಿ ಹೋರಾಟ ಮಾಡುವುದರಿಂದ ಮಾತ್ರ ಯಶಸ್ಸನ್ನು ಪಡೆಯಲು ಸಾಧ್ಯ ಎಂದರು
ಎರಡು ದಿನದ ಅಧ್ಯಾಪನಾ ಅಬಿವೃದ್ಧಿ ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಕಾಲೇಜುಗಳಿಂದ 24 ಜನ ಉಪನ್ಯಾಸಕರು ಪಾಲ್ಗೊಂಡಿದ್ದರು.
ಮಣಿಪಾಲ್ ಸ್ಕೂಲ್ ಆಫ್ ಇನ್ಫಮೇಶನ್ ಸೈನ್ಸ್ ಪ್ರೊ.ಮೋಹನ್ ಕುಮಾರ್ ಜೆ, ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಂಯೋಜಕರಾದ ಪ್ರೊ. ವಾಸುದೇವ ಶಹಾಪುರ್, ಕಾರ್ಯಕ್ರಮ ಸಂಚಾಲಕ ಡಾ. ಮಂಜುನಾಥ್ ಕೊಠಾರಿ ಮುಂತಾದವರು ಉಪಸ್ಥಿತರಿದ್ದರು. ಪ್ರೊ.ವಾಸುದೇವ ಶಹಪುರ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಸುಶಾಂತ್ ಮಂಗಸುಳಿ ವಂದಿಸಿ, ಪ್ರಾಧ್ಯಾಪಕಿ ಮೇಘಾ ಹೆಗ್ಡೆ.ಡಿ ನಿರೂಪಿಸಿದರು.