ಆಳ್ವಾಸ್ ನುಡಿಸಿರಿಯ ಅಂಗವಾಗಿ ರಾಷ್ಟ್ರೀಯ ಛಾಯಾಚಿತ್ರ ಸಿರಿ ಸ್ಪರ್ಧೆ
ಉಡುಪಿ : ಛಾಯಾಚಿತ್ರಕ್ಕೂ ಕಲೆಯ ಸ್ಥಾನಮಾನ ಕಲ್ಪಿಸಿಕೊಡುವ ವಿಶೇಷ ಉದ್ದೇಶದಿಂದ ಈ ಬಾರಿಯಿಂದ ಆಳ್ವಾಸ್ ನುಡಿಸಿರಿಯ ಅಂಗವಾಗಿ ಆಳ್ವಾಸ್ ರಾಷ್ಟ್ರೀಯ ಛಾಯಾಚಿತ್ರ ಸಿರಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಫೋಕೊಲೊರ್, ಹೆರಿಟೇಜ್, ನೇಚರ್ ಮತ್ತು ಪೀಪಲ್ ನಾಲ್ಕು ವಿಭಾಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಿಲಾಗಿದೆ. ಪ್ರತಿ ವಿಭಾಗದಲ್ಲೂ ಪ್ರಥಮ ರೂ. 10, ದ್ವಿತೀಯ ರೂ. 7 ಮತ್ತು ತೃತೀಯ ರೂ. 5 ಸಾವಿರ ನಗದು ಬಹುಮಾನವನ್ನು ಇರಿಸಲಾಗಿದೆ. ಪ್ರತಿ ವಿಭಾಗದಲ್ಲೂ ಸಮಾಧಾನಕರ ಬಹುಮಾನವೂ ಇದೆ ಎಂದು ಆಳ್ವಾಸ್ ರಾಷ್ಟ್ರೀಯ ಛಾಯಾಚಿತ್ರ ಸಿರಿ ಸ್ಪಧೆ ್ಯ ಸಂಘಟನಾ ಕಾರ್ಯದರ್ಶಿ ಆಸ್ಟ್ರೋ ಮೋಹನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಲ್ಕು ವಿಭಾಗಗಳಲ್ಲಿ ಜರಗುವ ಸ್ಪರ್ಧೆಯಲ್ಲಿ ವಿಜೇತರ ಹಾಗೂ ಆಯ್ಕೆಯಾದ ಒಟ್ಟು 60 ಚಿತ್ರಗಳನ್ನು ಆಳ್ವಾಸ್ ನುಡಿಸಿರಿ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಚಿತ್ರಗಳನ್ನು ಆನ್‍ಲೈನ್ ಮೂಲಕವೇ ಕಳುಹಿಸಬೇಕು. ಅದಕ್ಕೆ ಬೇಕಾದ ಸಕಲ ಮಾಹಿತಿಯನ್ನು www.photosiri.com
ಲಭ್ಯವಿದ್ದು ಆಸಕ್ತರು ಭಾಗವಹಿಸಬೇಕೆಂದು ಅವರು ಕೋರಿದ್ದಾರೆ.
ಛಾಯಾಚಿತ್ರ ಸಿರಿ ಪ್ರಶಸ್ತಿ
ಚಿತ್ರಕಲಾವಿದರಿಕೆ ಪ್ರತಿವರ್ಷ ನೀಡಲಾಗುವ ವಿಶೇಷ ಪುರಸ್ಕಾರವನ್ನು ಈ ಬಾರಿಯಿಂದ ಛಾಯಾಚಿತ್ರ ಕಲಾವಿದರಿಗೂ ವಿಸ್ತರಿಸಲು ಆಳ್ವಾಸ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಡಾ| ಮೋಹನ್ ಆಳ್ವ ನಿರ್ಧರಿಸಿದ್ದಾರೆ. ನ. 13 ರಂದು ನೀಡಲಾಗುವ ಈ ಪ್ರಶಸ್ತಿಗಾಗಿ ಸೂಕ್ತ ವ್ಯಕ್ತಿಯನ್ನು ಆರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.
ಛಾಯಾಚಿತ್ರ ಸ್ಪರ್ಧೆಯಲ್ಲಿ ಮಂಗಳೂರಿನ ಹಿರಿಯ ಛಾಯಾಚಿತ್ರಗಾರ ಯಜ್ಞ, ಬೆಂಗಳೂರಿನ ಕೆ.ಎ. ಸೂರ್ಯಪ್ರಕಾಶ್ ಹಾಗೂ ತಾವು ತೀರ್ಪುಗಾರರಾಗಿದ್ದು, ಜಿನೇಶ್ ಪ್ರಸಾದ್, ರವಿ ಪೊಸವಣಿಕೆ , ಜನಾರ್ದನ ಕೊಡವೂರು ಹಾಗೂ ಅಪುಲ್ ಇರಾ ಸಲಹೆಗಾರರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ವಿಶಿಷ್ಟವಾದ ಛಾಯಾಚಿತ್ರ ಸಿರಿ ಸ್ಪರ್ಧೆಯಲ್ಲಿ ಯಾರೂ ಭಾಗವಹಿಸಬಹುದಾಗಿದ್ದು ಉತ್ತಮ ಚಿತ್ರಗಳ ನೀರಿಕ್ಷೆಯಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.