ನಂಬಿಕೆ ಮತ್ತು ವೈಚಾರಿಕತೆ ಒಂದೇ ನಾಣ್ಯದ ಎರಡು ಮುಖ: ಡಾ.ರಂಜಾನ್ ದರ್ಗಾ
ಮೂಡಬಿದಿರೆ: “ಉಪನಿಷತ್ತು, ವಚನ, ಬುದ್ಧ-ಮಹಾವೀರ ಮುಂತಾದ ಶ್ರೇಷ್ಠ ವಾಣಿಗಳನ್ನು ಯಾವ ಒಂದು ಧರ್ಮದ ಬಾಲಂಗೋಚಿಯಾಗಿಸುವುದು ಬೇಡ. ಅದು ಎಲ್ಲಾ ಧರ್ಮಗಳಿಗೂ ಸಲ್ಲುತ್ತದೆ” ಎಂದು ಹಿರಿಯ ಪತ್ರಕರ್ತ ಡಾ.ರಂಜಾನ್ ದರ್ಗಾ ಹೇಳಿದರು.
ಆಳ್ವಾಸ್ ನುಡಿಸಿರಿಯ ಅಂಗವಾಗಿ ಭಾನುವಾರ ನಡೆದ ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ “ನಂಬಿಕೆ ಮತ್ತು ವೈಚಾರಿಕತೆ” ಎಂಬ ವಿಷಯದ ಕುರಿತು ಮಾತನಾಡಿದರು.
“ನಂಬಿಕೆ ಮತ್ತು ವೈಚಾರಿತೆ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಒಂದನ್ನು ಬಿಟ್ಟು ಮತ್ತೊಂದು ಮುನ್ನಡೆಯಲು ಸಾಧ್ಯವಿಲ್ಲ. ಅದನ್ನೇ ನಮ್ಮ ಶ್ರೇಷ್ಠ ಕೃತಿಗಳು ಸಾರುತ್ತವೆ. ನಂಬಿಕೆ ವೈಚಾರಿಕತೆಯ ನೆಲೆಯಲ್ಲಿ ಪ್ರಯೋಗಕ್ಕೊಳಗಾಗಬೇಕು. ಇಲ್ಲವಾದರೆ ನಂಬಿಕೆಯೆನ್ನುವುದು ಅಪನಂಬಿಕೆ,ಮೂಢನಂಬಿಕೆಗಳ ಸ್ವರೂಪ ಪಡೆದುಕೊಳ್ಳುತ್ತದೆ. ಆಗ ವೈಚಾರಿಕತೆ ತನ್ನ ಸತ್ವ ಕಳೆದುಕೊಳ್ಳುತ್ತದೆ” ಎಂದು ಡಾ.ದರ್ಗಾ ಅಭಿಪ್ರಾಯಪಟ್ಟರು.
“ವಿಜ್ಞಾನ ಎಲ್ಲಾ ಪ್ರಶ್ನೆಗಳಿಗೆ ಹೇಗೆ ಎಂಬ ಉತ್ತರ ನೀಡುತ್ತದೆ. ಆದರೆ ಏಕೆ ಎನ್ನುವುದನ್ನು ಉತ್ತರಿಸುವುದಿಲ್ಲ. ಆಗ ನಂಬಿಕೆ ಹುಟ್ಟಿಕೊಳ್ಳುತ್ತದೆ. ಆ ನಂಬಿಕೆಯೇ ಧರ್ಮವಾಗಿ ಪರಿವರ್ತನೆಗೊಳ್ಳುತ್ತದೆ. ಅಲ್ಲಿಂದ ಪ್ರಯೋಗಗಳು ಆರಂಭಗೊಳ್ಳುತ್ತವೆ. ನಂಬಿಕೆಯ ವಿಚಾರದಲ್ಲಿ ಇಂತಹ ಪ್ರಯೋಗಗಳು ಸದಾ ಜರುಗುತ್ತಿರಬೇಕು ಎಂದು ನಮ್ಮ ಧರ್ಮ ಸಂಸ್ಥಾಪಕರೇ ಪ್ರತಿಪಾದಿಸಿದ್ದಾರೆ” ಎಂದು ತಿಳಿಸಿದರು.
“ನಂಬಿಕೆ ಮತ್ತು ವೈಚಾರಿಕತೆ ಬಹುತ್ವದ ಪರಿಕಲ್ಪನೆಯಲ್ಲಿ ಬೆಳೆದುಬಂದಿವೆ. ಬಹುತ್ವ ದೇಶದ ಆತ್ಮವಿದ್ದಂತೆ. ಈ ಆತ್ಮದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಇದಕ್ಕೆ ಭಾರತೀಯ ಮನಸ್ಸುಗಳು ಸಿದ್ಧವಾಗಬೇಕು. ಆಗ ಮಾತ್ರ ಸಾಮರಸ್ಯದಿಂದ ದೇಶ ಬದುಕುತ್ತದೆ. ಈ ಮೂಲಕ ಬಹುತ್ವವನ್ನು ಉಳಿಸಿಕೊಳ್ಳುವ ಕಾರ್ಯ ನಡೆಯಬೇಕು” ಎಂಬ ಆಶಯ ವ್ಯಕ್ತಪಡಿಸಿದರು.
“ವೈಜ್ಞಾನಿಕ ಮನೋಧರ್ಮದ ಆಧಾರದ ಮೇಲೆ ಸರ್ವಶ್ರೇಷ್ಠ ಧರ್ಮ ಎಂದರೆ ಅದು ವಚನ ಧರ್ಮ. ಸಮತ್ವ ವಾದದ ಮೇಲೆ ಅವರು ಜಗತ್ತಿನಲ್ಲಿ ಸಂಕುಲ ಪ್ರಜ್ಞೆಯನ್ನು ಹುಟ್ಟು ಹಾಕಿದರು. ಇಲ್ಲಿನ ಉದಾತ್ತ ವಿಚಾರಗಳನ್ನು ಧರ್ಮ ಮೀರಿ ಸ್ವೀಕರಿಸುವಂತಾಗಬೇಕು” ಎಂದು ಪ್ರತಿಪಾದಿಸಿದರು.
“ನಂಬಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡರೆ ಜಗತ್ತಿನಲ್ಲಿ ಅನರ್ಥಗಳು ಜರುಗುತ್ತವೆ. ಅದು ಜ್ಞಾನ ಹಾಗೂ ವಿಚಾರವನ್ನು ನೀಡುವ ದೀವಿಗೆಯಾಗಬೇಕು. ಹಾಗೇ ಇತಿಹಾಸವನ್ನು ತಿಳಿದುಕೊಳ್ಳಬೇಕೆ ಹೊರತು ಅದೇ ನೆಲೆಯಲ್ಲಿ ಬದುಕಬಾರದು. ಹೊಸದನ್ನು ಸೃಷ್ಟಿಸುವ ತುಡಿತವಿರಬೇಕು. ಆಗ ನಂಬಿಕೆ ಮತ್ತು ವೈಚಾರಿಕತೆಗಳ ಸಂಶ್ಲೇಷಣೆಯಾಗಿ ಸಮಾಜದಲ್ಲಿ ಮಾನವೀಯತೆ ಬೆಳೆಯುತ್ತದೆ. ಆಗ ಬಹುತ್ವದ ವಿಚಾರ ಸಂಪೂರ್ಣವಾಗಿ ಸಾಕಾರಗೊಳ್ಳುತ್ತದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನುಡಿಸಿರಿ ಸಮ್ಮೇಳನಾಧ್ಯಕ್ಷರಾದ ಡಾ.ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ನಾ.ದಾ.ಶೆಟ್ಟಿ ಉಪಸ್ಥಿತರಿದ್ದರು.
ವ್ಯಾಪಾಕವಾದ ಓದು ಹೃದಯದ ಜಗತ್ತನ್ನು ವಿಸ್ತಾರಮಾಡಿದೆ –ಡಾ. ಆನಂದ್ ಋಗ್ವೇದಿ
ಮೂಡುಬಿದಿರೆ: ಬದುಕು ಒಂದು ಕಡೆ ನಿಲ್ಲದ ಹಾಗೆ ಹಲವಾರು ಕಡೆ ಓಲಾಡಿಸಿ ಬೆಳೆಸಿರುವ ಕಾರಣ ನನಗೆ ಸಾಹಿತ್ಯದ ಓದು ಸಾಧ್ಯವಾಗಿದೆ. ಇದು ನನ್ನ ಬರವಣಿಗೆಗೆ ಇಂಬು ಕೊಟ್ಟಿದೆ ಎಂದು ಶ್ರೇಷ್ಠ ಕವಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕೇರಿ ಜಿಲ್ಲಾ ಆಸ್ಪತ್ರೆ ದಾವಣಗೆರೆಯ ಕಛೇರಿ ಅಧೀಕ್ಷಕ ಡಾ. ಆನಂದ್ ಋಗ್ವೇದಿ ಹೇಳಿದರು.
ಮೂಡುಬಿದಿರೆಯ ‘ಆಳ್ವಾಸ್ ನುಡಿಸಿರಿ-2017’ ಪ್ರಯುಕ್ತ ರತ್ನಾಕರವರ್ಣಿ ವೇದಿಕೆಯಲ್ಲಿ ಮಂಗಳವಾರ ನಡೆದ ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ ಕವನವಾಚಿಸಿ ಅವರು ಮಾತನಾಡಿದರು.
ಸಾಹಿತ್ಯ ಹಿನ್ನೆಲೆಯ ನನ್ನ ಕುಟುಂಬದಲ್ಲಿ ತಾಯಿ ಮತ್ತು ಅನೇಕ ಬಂಧುಗಳು ಲೇಖಕರಾಗಿರುವುದರಿಂದ ಬದುಕಿನಲ್ಲಿ ಸಾಹಿತ್ಯದ ಅನುಭವ ದ್ರವ್ಯ ನೆಲೆಮಾಡಿದೆ. ಬೇರೆ ಬೇರೆ ಪ್ರದೇಶಗಳಲ್ಲಿ ಓದಿ, ಬೆಳೆದ ನನ್ನ ಅಲೆಮಾರಿತನ ಮತ್ತು ತಿರುಗಾಟ ನನಗೆ ಸಾಕಷ್ಟು ಅನುಭವಗಳನ್ನು ಕಟ್ಟಿಕೊಟ್ಟಿದೆ. ಅದು ಒಂದು ಸಮಾಜವನ್ನು ನನ್ನ ಹೃದಯದಲ್ಲಿ ನಿಲ್ಲಿಸಿದೆ. ಈ ಇಡೀ ಬಹುತ್ವ ನನ್ನ ಅನುಭವವನ್ನು ಇಮ್ಮಡಿಗೊಳಿಸಿದೆ. ವ್ಯಾಪಕವಾದ ಓದು ಹೃದಯದ ಜಗತ್ತನ್ನು ವಿಸ್ತಾರವಾಗಿಸಿದೆ.
ಬರಹಗಳು ನೀಡುವ ಸಾಂತ್ವನ, ನೆಮ್ಮದಿ ಮತ್ತು ಧೈರ್ಯ ಬಹುವಾಗಿದೆ. ಇದು ಓದುಗರಿಗೆ ತಲುಪಬೇಕಾದ್ದು ಬಹುಮುಖ್ಯ ಎಂದು ಡಾ.ಋಗ್ವೇದಿ ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಆನಂದ್ ಋಗ್ವೇದಿ ಅವರ ಕವಿತೆಯನ್ನು ಬೆಂಗಳೂರಿನ ಎಂ.ಎಸ್ ಗಿರಿಧರ್ ರಾಗಸಂಯೋಜನೆಯಲ್ಲಿ ಕೃಷ್ಣ ಕಾರಂತ್ ಹಾಡಿದರು. ಬೆಂಗಳೂರಿನ ಬಾಗೂರು ಮಾರ್ಕಾಂಡೆ ಅವರು ಕವಿತೆಗೆ ಕುಂಚದ ಸ್ಪರ್ಶ ನೀಡಿದರು.
ವೇದೀಕೆಯಲ್ಲಿ ನುಡಿಸಿರಿ ಸಂಘಟಕ ಡಾ.ಜಯಪ್ರಕಾಶ್ ಉಪಸ್ಥಿತರಿದ್ದರು.
ಮನುಷ್ಯ ಧರ್ಮವನ್ನು ಉಳಿಸಬೇಕು: ರೇಖಾ ಕಾಖಂಡಕಿ
ಪ್ರಸ್ತುತ ಇವತ್ತಿನ ಸ್ಥಿತಿಯಲ್ಲಿ ನಾವು ನಮ್ಮ ಸುತ್ತಲಿನ ಪರಿಸರ, ಪರಿಸ್ಥಿತಿ, ಸಂದರ್ಭಗಳನ್ನು ಕಂಡಾಗ ಯಾವುದೇ ಒಂದು ಕತ್ತಲಿನ ನೆರಳಿನಲ್ಲಿ ಬದುಕುತ್ತಿದ್ದೇವೆ ಎನಿಸುವಷ್ಟರ ಮಟ್ಟಿಗೆ,ಸಮಾಜದಲ್ಲಿ ದೌರ್ಜನ್ಯ, ಅನಾಚಾರಗಳು ನಡೆಯುತ್ತಿವೆ ಎಂದು ಕವಯಿತ್ರಿ ರೇಖಾ ಕಾಖಂಡಕಿ ಹೇಳಿದರು.
ಆಳ್ವಾಸ್ ನುಡಿಸಿರಿಯ ಕವಿಸಮಯ-ಕವಿನಮನ ಕಾರ್ಯಕ್ರಮದಲ್ಲಿ `ಯಾರಿದ್ದರೂ ಮನೆಯಲ್ಲಿ ಮನವೆಂಬ ಗೂಡಿನಲ್ಲಿ’ ಎಂಬ ಕವನ ವಾಚಿಸಿ ಮಾತನಾಡಿದರು. ಕುಸಿಯುತ್ತಿರುವ ಸಾಮಾಜಿಕ ಮೌಲ್ಯಗಳು, ನಶಿಸುತ್ತಿರುವ ಕೌಟುಂಬಿಕ ಸಂಬಂಧಗಳು ಇವುಗಳನ್ನೆಲ್ಲಾ ನೋಡಿದಾಗ ನಮ್ಮೂಳಗಿದ್ದ ಕತ್ತಲನ್ನು ಹೊರಹಾಕಲು ಒಂದು ಬೆಳಕಿನ ದೀಪ ಬೇಕಿದೆ. ಆ ದೀಪವನ್ನು ಹಚ್ಚಿ ಮನದೊಳಗಿದ್ದ ಕಲ್ಮಶಗಳನ್ನು ತೊಳೆಯಬೇಕಿದೆ. `ಮನುಷ್ಯರಿಗೆ ಬೇಕಾದದ್ದು ಮನುಷ್ಯ ಧರ್ಮ’. ಈ ಮನುಷ್ಯ ಧರ್ಮವನ್ನು ಉಳಿಸಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಬಾಗೂರು ಮಾರ್ಕಂಡೇಯನವರು ಕವನಕ್ಕೆ ಕುಂಚದ ಸಾಥ್ ನೀಡಿದರು. ಆಶಿಷ್ ನಾಯಕ್ ಕವಿತೆಯನ್ನು ಹಾಡಿನ ಮೂಲಕ ಮತ್ತಷ್ಟು ಅರ್ಥಪೂರ್ಣಗೊಳಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಡಾ.ಮೌಲ್ಯ ಜೀವನ್‍ರಾಮ್ ಕಾರ್ಯಕ್ರಮ ನಿರೂಪಿಸಿದರು. ಕವಿಸಮಯ ಕವಿನಮನ ಕಾರ್ಯಕ್ರಮದಲ್ಲಿ ನುಡಿಸಿರಿಯ ಅಧ್ಯಕ್ಷರಾದ ನಾಗತಿಹಳ್ಳಿ ಚಂದ್ರಶೇಖರ್, ಸ್ವಾಗತ ಸಮಿತಿಯ ಅಧ್ಯಕ್ಷರಾದ ನಾದಾ ಶೆಟ್ಟಿ ಉಪಸ್ಥಿತರಿದ್ದರು.