Home Mangalorean News Kannada News ಡಾ. ಬಿ.ಆರ್ ಶೆಟ್ಟಿ ಅವರಿಂದ ಆಳ್ವಾಸ್ ಪ್ರಗತಿಗೆ ಚಾಲನೆ

ಡಾ. ಬಿ.ಆರ್ ಶೆಟ್ಟಿ ಅವರಿಂದ ಆಳ್ವಾಸ್ ಪ್ರಗತಿಗೆ ಚಾಲನೆ

Spread the love

ಡಾ. ಬಿಆರ್ ಶೆಟ್ಟಿ ಅವರಿಂದ ಉದ್ಘಾಟನೆ, 304 ಕಂಪನಿಗಳು, 12 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು

ಮೂಡಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ನಡೆಸಲ್ಪಡುವ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳದ ಏಳನೇ ಆವೃತ್ತಿಯನ್ನು ಎನ್.ಎಮ್.ಸಿ ಮತ್ತು ಯು.ಎ.ಯಿ ಎಕ್ಸಚೇಂಜ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ| ಬಿ.ಆರ್ ಶೆಟ್ಟಿ, ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವ್ಯಕ್ತಿಯು ಈ ಸಮಾಜದಿಂದ ಪಡೆದ  ಲಾಭವನ್ನು ಹಿಂದಿರುಗಿಸುವ  ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಅದುವೇ ಅವನನ್ನು ಒಬ್ಬ ಉತ್ತಮ ನಾಗರಿಕನನ್ನಾಗಿ ಪರಿವರ್ತಿಸುತ್ತದೆ ಎಂದು ನುಡಿದರು.

image002alvas-pragati-20160702-002

ನನ್ನ ಇಂದಿನ ಉತ್ತಮ ಸ್ಥಿತಿಗೆ ನನ್ನ ಕಠಿಣ ಪರಿಶ್ರಮ , ಶಿಸ್ತು, ಸಂಯಮವೇ ಕಾರಣ. ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ  ಜೀವನವನ್ನು ರೂಪಿಸಲು ಮುಂದಾಗಬೇಕು.  ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಸೂಕ್ತ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ಏಳು ವರ್ಷದಿಂದ ನೆಡೆಸಲ್ಪಡುವ  ಆಳ್ವಾಸ್ ಪ್ರಗತಿಯು ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನ ಭದ್ರಪಡಿಸಿಕೊಳ್ಳಲು ಪ್ರಮುಖ ವೇದಿಕೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಶಾಸಕರಾದ ಅಭಯಚಂದ್ರ ಜೈನ್ ಮಾತಾನಾಡಿ,  ಇಂದಿನ ಶಿಕ್ಷಣ ಕ್ಷೇತ್ರದಲ್ಲಿನ ಕ್ರಾಂತಿಯು ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಉದ್ಯೋಗಾಕಾಂಕ್ಷಿಗಳನ್ನು ನಿರ್ಮಿಸುತ್ತಿದೆ.  ಇಂತಹ ಸವಾಲನ್ನು ಮನಗಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ‘ಆಳ್ವಾಸ್ ಪ್ರಗತಿ’ ಯಂತಹ ಉದ್ಯೋಗ ಮೇಳಗಳನ್ನು ಆಯೋಜಿಸುವುದರ ಮೂಲಕ ಸಾವಿರಾರು ನಿರುದ್ಯೋಗಿಗಳಿಗೆ ಹೊಸ ದಿಕ್ಕನ್ನು ತೋರಿಸುತ್ತಿದೆ ಎಂದರು.

ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಪ್ಲೇಸ್‍ಮೆಂಟ್ ಹೆಡ್ ಜಯಶ್ರಿ ಸುಧಾಕರ್ ಉಪಸ್ಥಿತರಿದ್ದರು. ಪ್ರೊ. ರವೀಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಯೋಜನೆಗಳಲ್ಲಿ ವಾರ್ಷಿಕವಾಗಿ ನಡೆಯುವ ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೋಗ ಮೇಳ ಪ್ರಮುಖವಾಗಿದೆ. ಏಳನೇ ಆವೃತ್ತಿಯ ಆಳ್ವಾಸ್ ಪ್ರಗತಿಯಲ್ಲಿ 304 ಕಂಪನಿಗಳು ಇಂದು ಭಾಗವಹಿಸಿದ್ದು, 10,242 ಆಕಾಂಕ್ಷಿಗಳು ಆನ್‍ಲೈನ್ ಹಾಗೂ 2,173 ಮಂದಿ ಸ್ಥಳದಲ್ಲಿಯೇ ನೋಂದಣಿ ಮಾಡಿಸಿಕೊಂಡಿದ್ದು, ಮೊದಲ ದಿನವೇ 10,856 ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದಾರೆ. ಎನ್‍ಎಂಸಿ, ಅಮೆಝಾನ್, ಐಬಿಎಂ, ಒರಾಕಲ್, ಯುಎಇ ಎಕ್ಸ್‍ಚೇಂಜ್, ಟೆಸ್ಕೊ, ಸ್ಟಾಂಡರ್ಡ್ ಚಾರ್ಟೆಡ್ ಹಾಗೂ ಇನ್ನಿತರ ಪ್ರಮುಖ ಕಂಪನಿಗಳು ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸಿವೆ. ಅರ್ಹ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಉದ್ಯೋಗ ಪತ್ರವನ್ನು ನೀಡುತ್ತಿವೆ.

ಆಗಮಿಸುವವರ ಅನುಕೂಲಕ್ಕಾಗಿ ಡಿಗ್ರಿ ಬ್ಲಾಕಿನಲ್ಲಿ ಡಿಪ್ಲೊಮ, ಐಟಿಐ, ಪಿಯುಸಿ, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪೂರಕವಾದ ಕಂಪನಿಗಳಿಗೆ ಅವಕಾಶ ನೀಡಲಾಗಿದೆ. ಪಿಯುಸಿ ಮುಖ್ಯ ಕಟ್ಟಡದಲ್ಲಿ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಹಾಗೂ ಇತರೆ ಕಂಪನಿಗಳಿಗೆ ಲೈಬ್ರೆರಿ ಬ್ಲಾಕಿನಲ್ಲಿ ಸಂದರ್ಶನ ಆಯೋಜಿಸಲಾಗಿದೆ. ಸೂಕ್ತ ಉದ್ಯೋಗವಕಾಶಗಳ ಕುರಿತು ಮಾಹಿತಿ ನೀಡಲು ನುಡಿಸಿರಿ ವೇದಿಕೆ ಹಾಗೂ ಮುಖ್ಯ ಕಟ್ಟಡದ ಒಳಾಂಗಣದಲ್ಲಿ ಉದ್ಯೋಗ ಮಾರ್ಗದರ್ಶಿ ಕೇಂದ್ರಗಳು, ಕ್ಲಾರಿಟಿ ವಾಲ್, ಡಿಜಿಟಲ್ ವಾಲ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಆಳ್ವಾಸ್ ಪ್ರಗತಿ ಭಾನುವಾರ ಸಂಜೆಯ ತನಕ ನಡೆಯಲಿದೆ.


Spread the love

Exit mobile version