Home Mangalorean News Kannada News ಆಸ್ತಿಗಾಗಿ ತಮ್ಮನನ್ನು ಕೊಂದ ಅಣ್ಣ – ಎಂಟು ತಿಂಗಳ ಬಳಿಕ ಪ್ರಕರಣ ಭೇಧಿಸಿದ ಕಾರ್ಕಳ ಪೊಲೀಸರು

ಆಸ್ತಿಗಾಗಿ ತಮ್ಮನನ್ನು ಕೊಂದ ಅಣ್ಣ – ಎಂಟು ತಿಂಗಳ ಬಳಿಕ ಪ್ರಕರಣ ಭೇಧಿಸಿದ ಕಾರ್ಕಳ ಪೊಲೀಸರು

Spread the love

ಆಸ್ತಿಗಾಗಿ ತಮ್ಮನನ್ನು ಕೊಂದ ಅಣ್ಣ – ಎಂಟು ತಿಂಗಳ ಬಳಿಕ ಪ್ರಕರಣ ಭೇಧಿಸಿದ ಕಾರ್ಕಳ ಪೊಲೀಸರು

ಕಾರ್ಕಳ: ಆಸ್ತಿಗಾಗಿ ತಮ್ಮನನ್ನು ರಾಡ್‌ನಿಂದ ಬಡಿದು ಕೊಂದು ರಾಮಸಮುದ್ರ ಪರಿಸರದಲ್ಲಿ ಸುಟ್ಟು ಸಾಕ್ಷಾೃಧಾರ ನಾಶಪಡಿಸಿದ ಆರೋಪಿಯನ್ನು ಎಂಟು ತಿಂಗಳ ಬಳಿಕ ಬಂಧಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೆಲ್ವಿನ್ ಸಂತೋಷ್ ಡಿಸೋಜಾ

ಅವಿಲ್ ಡಿಸೋಜಾ

ಕಾರ್ಕಳ ನಗರದ ಮಂಗಲಪಾದೆ ಅವೆ ಮರಿಯಾ ನಿವಾಸದ ಮೆಲ್ವಿನ್ ಸಂತೋಷ್ ಡಿಸೋಜಾ ಪ್ರಕರಣದ ಆರೋಪಿ. ಆತನ ತಮ್ಮ ಅವಿಲ್ ಡಿಸೋಜಾ ಕೊಲೆಗೀಡಾದವರು.

2018 ಮಾರ್ಚ್ 30ರ ರಾತ್ರಿ 10ಕ್ಕೆ ಆಸ್ತಿ ವಿವಾದಕ್ಕೆ ಸಂಬಂಧಿಸಿ ಸಹೋದರರಲ್ಲಿ ಜಗಳ ಉಂಟಾಗಿತ್ತು. ಆ ಸಂದರ್ಭ ಅವಿಲ್ ಡಿಸೋಜಾ ತನ್ನ ಅಣ್ಣ ಮೆಲ್ವಿನ್ ಸಂತೋಷ್ ಡಿಸೋಜಾನಿಗೆ ಹಲ್ಲೆಗೈದಿದ್ದು, ಅದಕ್ಕೆ ಪ್ರತಿಯಾಗಿ ಮೆಲ್ವಿನ್ ರಾಡ್‌ನಿಂದ ಪ್ರತಿದಾಳಿ ನಡೆಸಿದಾಗ ಅವಿಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಪ್ರಕರಣದ ಸಾಕ್ಷೃನಾಶಪಡಿಸುವ ಸಲುವಾಗಿ ತಡರಾತ್ರಿ ಶವವನ್ನು ಹೊತ್ತು ಮನೆ ಸಮೀಪದ ರಾಮಸಮುದ್ರ ಪರಿಸರಕ್ಕೆ ಸಾಗಿಸಿದ ಮೆಲ್ವಿನ್ ಶವದ ಮೇಲೆ ಕಟ್ಟಿಗೆ ರಾಶಿ ಹಾಕಿ ಸುಟ್ಟು ನಸುಕಿನ ಜಾವ ಮನೆಗೆ ಮರಳಿದ್ದಾನೆ. ಅವಿಲ್ ನಾಪತ್ತೆಯಾದ ಕುರಿತು ಅಂದು ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಅವಿಲ್ ನಿಗೂಢ ನಾಪತ್ತೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೆಲ್ವಿನ್ ಸಂತೋಷ್ ಡಿಸೋಜಾನನ್ನು ಠಾಣೆಗೆ ಬರುವಂತೆ ತಿಳಿಸಿ ವಿಚಾರಣೆ ನಡೆಸಿದರು. ಆತನ ದೇಹದಲ್ಲಿ ಬಲವಾದ ಗಾಯದ ಗುರುತು ಕಂಡು ಬಂದಿದ್ದರಿಂದ ಸಂಶಯಗೊಂಡ ಪೊಲೀಸರು ಆತನನ್ನು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಿದರು. ಪರಿಣಾಮ ಆರೋಪಿ ಮೆಲ್ವಿನ್ ತಾನು ಮಾಡಿದ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರ್ಗಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಕಾರ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ನಿರ್ದೇಶನದಂತೆ ತನಿಖಾಧಿಕಾರಿ ಕಾರ್ಕಳ ವೃತ್ತ ನಿರೀಕ್ಷಕ ವಿ.ಎಸ್. ಹಾಲಮೂರ್ತಿ ರಾವ್ ಮತ್ತು ಕಾರ್ಕಳ ನಗರ ಠಾಣಾಧಿಕಾರಿ ನಂಜಾ ನಾಯ್ಕ ನೇತೃತ್ವದಲ್ಲಿ ಅಪರಾಧ ಪತ್ತೆದಳದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್, ಪ್ರಶಾಂತ್, ರಾಘವೇಂದ್ರ, ಕಾರ್ಕಳ ನಗರ ಎಎಸ್ಸೈ ದಿನಕರ್, ಸಿಬ್ಬಂದಿಗಳಾದ ಕಿಶೋರ್, ನಾಗೇಶ್ ನಾಯಕ್, ಘನಶ್ಯಾಮ್ ಈ ಕಾರ್ಯಾಚರಣೆ ನಡೆಸಿದ್ದಾರೆ.


Spread the love

Exit mobile version