ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳ ದರ ಪಟ್ಟಿ ಪ್ರಕಟಿಸುವಂತೆ ಡಿವೈಎಫ್ ಐ ಮನವಿ

Spread the love

ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳ ದರ ಪಟ್ಟಿ ಪ್ರಕಟಿಸುವಂತೆ ಡಿವೈಎಫ್ ಐ  ಮನವಿ

ಮಂಗಳೂರು : ನಗರದ ವಿವಿಧ ಖಾಸಗೀ ಆಸ್ಪತ್ರೆಗಳ ಆಡಳಿತ ನಿರ್ದೇಶಕರಿಗೆ ಡಿವೈಎಫ್‍ಐ ಸಂಘಟನೆಯ ನಿಯೋಗ   ಭೇಟಿ ಮಾಡಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ, 2007”ರ ನಿಯಮದ ಪ್ರಕಾರ ತಮ್ಮ ವೈದ್ಯಕೀಯ ಸಂಸ್ಥೆಗಳಲ್ಲಿ ನೀಡುವ ವಿವಿಧ ಚಿಕಿತ್ಸೆಗಳ ದರ ಪಟ್ಟಿ ಪ್ರಕಟಿಸುವ ಬಗ್ಗೆ  ಮನವಿಯನ್ನು ಸಲ್ಲಿಸಲಾಯಿತು.

dyfi-manavi-hospital

ಆರೋಗ್ಯಕ್ಷೇತ್ರ ಸೇವಾ ಕ್ಷೇತ್ರ, ಜನತೆಯ ಆರೋಗ್ಯದ ರಕ್ಷಣೆಗಾಗಿ, ಸೂಕ್ತ ಚಿಕಿತ್ಸೆಗಾಗಿ ಸರಕಾರಗಳು ಸಾರ್ವಜನಿಕ ಆಸ್ಪತ್ರೆಗಳನ್ನು, ವೈದ್ಯಕೀಯ ಸಂಸ್ಥೆಗಳನ್ನು ತೆರೆದಿವೆ. ಪರ್ಯಾಯವಾಗಿ ಖಾಸಗಿಯವರಿಗೂ ವೈದ್ಯಕೀಯ ಸಂಸ್ಥೆಗಳನ್ನು ತೆರೆಯಲು ಅವಕಾಶ ನೀಡಿದೆ. ಖಾಸಗಿಯವರಿಗೆ ಅವಕಾಶ ನೀಡಿರುವ ಉದ್ದೇಶ ಜನಸಾಮಾನ್ಯರಿಗೆ ಅರೋಗ್ಯ ಸೇವೆಗಳು ಇನ್ನಷ್ಟು ವ್ಯಾಪಕವಾಗಿ ದೊರಕಬೇಕು ಎಂಬುದು. ವೈದ್ಯಕೀಯ ಸಂಸ್ಥೆಗಳನ್ನು ನಡೆಸುವ ಖಾಸಗಿ ಸಂಸ್ಥೆಗಳು ಯಾವುದೇ ಕಾರಣಕ್ಕೂ ಆಸ್ಪತ್ರೆ, ನರ್ಸಿಂಗ್ ಹೋಂ, ಲ್ಯಾಬ್‍ಗಳನ್ನು ಲಾಭದಾಯಕ ಉದ್ಯಮವನ್ನಾಗಿ ಪರಿಗಣಿಸಲು ನೆಲದ ಕಾನೂನು, ಸಂವಿಧಾನ ಅವಕಾಶ ನೀಡುವುದಿಲ್ಲ. ಈ ರೀತಿ ಕಾಯ್ದೆ ಬದ್ಧವಾಗಿ ಖಾಸಗಿಯವರು ವೈದ್ಯಕೀಯ ಸಂಸ್ಥೆಗಳನ್ನು ನಡೆಸಲು, ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸಲು ಸರಕಾರ ನಿಯಮಗಳನ್ನು ರೂಪಿಸಿವೆ. ಕರ್ನಾಟಕ ರಾಜ್ಯ ಸರಕಾರವು ಈ ಉದ್ದೇಶದಿಂದಲೇ “ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ, 2007 ರೂಪಿಸಿದೆ. ಈ ಕಾನೂನಿನ ಪ್ರಕಾರ ಖಾಸಗಿ ವೈದ್ಯಕೀಯ ಸಂಸ್ಥೆಗಳು ಪಾಲಿಸಬೇಕಾದ 28 ನಿಯಮಗಳನ್ನು ಪಟ್ಟಿ ಮಾಡಲಾಗಿದೆ.

ಆ ರೀತಿ ರೂಪಿಸಲಾದ ನಿಯಮಗಳ ಪ್ರಕರಣ 10, ತಾವು ನೀಡಿದ ಚಿಕಿತ್ಸೆಗೆ ವಿಧಿಸುವ ದರ ಪಟ್ಟಿಯ ಪ್ರಕಟಿಸುವ ಕುರಿತು ಈ ರೀತಿ ವಿವರಿಸುತ್ತದೆ. “10 ವಿಧಿಸುವ ಚಾರ್ಜುಗಳ ಪಟ್ಟಿಯನ್ನು ಪ್ರಕಟಿಸಬೇಕು.”

 ಪ್ರತಿಯೊಂದು ಖಾಸಗಿ ವೈದ್ಯಕೀಯ ಸಂಸ್ಥೆಯು ರೋಗಿಗಳ ಹಾಗೂ ಸಾಮಾನ್ಯ ಜನರ ತಿಳುವಳಿಕೆಗಾಗಿ ವಿವಿಧ ವೈದ್ಯಕೀಯ ಚಿಕಿತ್ಸೆಗಳಿಗೆ ಮತ್ತು ಇತರ ಸೇವೆಗಳಿಗೆ ಸಂದಾಯ ಮಾಡತಕ್ಕ ಚಾರ್ಜುಗಳ ಪಟ್ಟಿಯನ್ನು ಕಿರು ಮಡಿಕೆಗಳು ಅಥವಾ ಕಿರುಹೊತ್ತಿಗೆಗಳಲ್ಲಿ ಲಭ್ಯವಾಗುವಂತೆ ಪ್ರದರ್ಶಿಸತಕ್ಕದ್ದು. ಅಂಥ ಕಿರುಮಡಿಕೆ ಅಥವಾ ಕಿರುಹೊತ್ತಿಗೆಯ ಪ್ರತಿಯನ್ನು ನೋಂದಣಿ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದು.

  ಯಾವ ಖಾಸಗಿ ವೈದ್ಯಕೀಯ ಸಂಸ್ಥೆಯು ರೋಗಿಯಿಂದ ಅಥವಾ ಆತನ ಸಂಬಂಧಿಯಿಂದ ಅಥವಾ ಅವರನ್ನು ನೋಡಿಕೊಳ್ಳುವವರಿಂದ ಕಿರುಮಡಿಕೆ ಅಥವಾ ಕಿರುಹೊತ್ತಿಗೆಯಲ್ಲಿ ಮುದ್ರಿಸಿದ ಹಾಗೂ ಪಡೆದುಕೊಂಡ ಮೊಬಲಗಿಗೆ ಸರಿಯಾದ ರಶೀದಿಯನ್ನು ನೀಡದೆ ಯಾವುದೇ ಮೊತ್ತವನ್ನು ಸಂಗ್ರಹಿಸತಕ್ಕದ್ದಲ್ಲ.

ಆದರೆ ಬಹುತೇಕ ವೈದ್ಯಕೀಯ ಸಂಸ್ಥೆಗಳು ಈ ನಿಯಮವನ್ನು ಪಾಲಿಸುತ್ತಿಲ್ಲ. ತಮ್ಮ ಸಂಸ್ಥೆಯ ಎಲ್ಲರಿಗೂ ಕಾಣುವ ಸ್ಥಳದಲ್ಲಿ ದರಪಟ್ಟಿಯನ್ನು ಅಂಟಿಸುವುದಾಗಲೀ, ರೋಗಿ ಅಥವಾ ರೋಗಿಯ ಕಡೆಯವರಿಗೆ ದರಪಟ್ಟಿಯನ್ನು ನೀಡುವುದಾಗಲೀ ಮಾಡುತ್ತಿಲ್ಲ. ಅಷ್ಟಲ್ಲದೆ ಪಡೆಯುವ ಚಾರ್ಜುಗಳಿಗೆ ಸರಿಯಾದ ರಶೀದಿ ನೀಡುವುದು ಕಂಡು ಬರುತ್ತಿಲ್ಲ. ಇದು ಗಂಭೀರವಾದ ಲೋಪವಾಗಿದ್ದು, ಅಸಹಾಯಕ ಪರಿಸ್ಥಿತಿಯಲ್ಲಿರುವ ರೋಗಿಗಳು ಅವರ ಕುಟುಂಬಸ್ಥರ ಶೋಷಣೆಗೆ ಅವಕಾಶ ಮಾಡಿ ಕೊಡುತ್ತದೆ.

ಈ ರೀತಿ ನಿಯಮ ಉಲ್ಲಂಘನೆ ದ.ಕ. ಜಿಲ್ಲೆಯ ಬಹುತೇಕ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಸಾಮಾನ್ಯವಾಗಿದೆ. ಈ ರೀತಿ ರೋಗಿಗಳನ್ನು ಮತ್ತವರ ಅಸಹಾಯಕ ಕುಟುಂಬವನ್ನು ಶೋಷಿಸುವುದನ್ನು ಡಿವೈಎಫ್‍ಐ ದ.ಕ. ಜಿಲ್ಲಾ ಸಮಿತಿ ಗಂಭೀರವಾಗಿ ಪರಿಗಣಿಸುತ್ತದೆ. ಖಾಸಗಿ ವೈದ್ಯಕೀಯ ಸಂಸ್ಥೆಗಳು “ಅಧಿನಿಯಮ 2007”ನ್ನು ಪಾಲಿಸುವಂತಾಗಲು ಜನಾಂದೋಲನ ರೂಪಿಸಲು ನಿರ್ಧರಿಸಿದೆ. ನೆಲದ ಕಾನೂನಿನ ಅನ್ವಯ ವೈದ್ಯಕೀಯ ಸಂಸ್ಥೆ ನಡೆಸುವುದಾಗಿ ಸರಕಾರದಿಂದ ಅನುಮತಿ ಪಡೆದಿರುವ ತಮ್ಮ ಸಂಸ್ಥೆಯು ದರಪಟ್ಟಿ ಪ್ರಕಟಿಸುವಿಕೆ, ಸೂಕ್ತ ರಶೀದಿ ನೀಡುವಿಕೆ ನಿಯಮ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಖಾತರಿಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದರು.

 ನಿಯೋಗದಲ್ಲಿ  ಡಿವೈಎಫ್‍ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಾದಿಕ್ ಕಣ್ಣೂರು, ಎ.ಬಿ. ನೌಷಾದ್, ನವೀನ್ ಕೊಂಚಾಡಿ, ರಿಯಾಜ್ ಬೆಂಗರೆ, ಹನೀಫ್ ಮುಂತಾದವರು ಉಪಸ್ಥಿತರಿದ್ದರು.


Spread the love