ಆ. 27 ರಂದು ಕಟಪಾಡಿಯಲ್ಲಿ ಐಸಿವೈಎಮ್ ಯುವಶಕ್ತಿಯ ಪ್ರತೀಕ “ಗದ್ದೆಯಲ್ಲಿ ಯುವ ಒಗ್ಗಟ್ಟು”
ಉಡುಪಿ: ಭಾರತೀಯ ಕಥೋಲಿಕ್ ಯುವ ಸಂಚಾಲನ ಸಂತ ವಿನ್ಸೆಂಟ್ ಡಿ’ಪಾವ್ಲ್ ದೇವಾಲಯ ಕಟಪಾಡಿ ಇವರು ಐಸಿವೈಎಮ್ ಉಡುಪಿ ವಲಯದ ಸಹಕಾರದೊಂದಿಗೆ ಅಗಸ್ಟ್ 27 ರಂದು ಕಟಪಾಡಿ ಚೊಕ್ಕಾಡಿ (ಪಾಪನಾಶಿನಿ ನದಿ ತೀರ) ಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವಜನರಿಗಾಗಿ (“ಗಾದ್ಯಾಂತ್ ಯುವ ಎಕ್ವಟ್”) ಗದ್ದೆಯಲ್ಲಿಯುವ ಒಗ್ಗಟ್ಟು ಎಂಬ ಶೀರ್ಷನಾಮದೊಂದಿಗೆ ಕೆಸರು ಗದ್ದೆಯಲ್ಲಿ ವೈವಿಧ್ಯಮಯ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಲೈನಲ್ ಪಿರೇರಾ ಹೇಳಿದರು.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಸಂಭ್ರಮದ ಮೊದಲ ಹೆಜ್ಜೆ ಬೆಳಿಗ್ಗೆ 8.00 ಗಂಟೆಗೆ ದಿವ್ಯಪೂಜೆಯೊಂದಿಗೆ ಇಡಲಾಗುವುದು. ನಂತರ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೂಲಿಯೆಟ್ ವೀರಾ ಡಿಸೋಜಾ ಸಂಭ್ರಮದ ವರ್ಣರಂಜಿತ ಮೆರವಣಿಗೆಗೆ ಚಾಲನೆ ನೀಡುವರು.
ಸ್ಪರ್ಧೆಗಳು ನಡೆಯುವಲ್ಲಿ ಬೆಳಗ್ಗೆ 10.00 ಗಂಟೆಗೆ ಉಡುಪಿ ಧರ್ಮಾಪ್ರಾಂತ್ಯದ ಶ್ರೇಷ್ಠ ಗುರುಗಳಾದ ಅತೀ ಬ್ಯಾಪ್ಟಿಸ್ಟ್ ಮಿನೇಜಸ್ ಇವರ ಅಧ್ಯಕ್ಷತೆಯೊಂದಿಗೆ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ವಿನಯ್ಕುಮಾರ್ ಸೊರಕೆಯವರು ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಮೆರಗನ್ನಿತ್ತರೆ ಅದಾನಿ ಯುಪಿಸಿಎಲ್ ಇದರ ಜಂಟಿ ಅಧ್ಯಕ್ಷರಾದ ಕಿಶೋರ್ ಆಳ್ವಾರವರು ಆಟೋಟ ಸ್ಪರ್ಧೆಗೆ ಮುನ್ನುಡಿ ಬರೆಯುವರು.
ಇಳಿ ಸಂಜೆ 5.00 ಗಂಟೆಗೆ ಸಮಾರೋಪ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರುಗಳಾದ ಅತೀ ವಂದನಿಯ ಡಾ| ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷರಾಗಿದ್ದು ಕರ್ನಾಟಕ ಸರಕಾರದ ಯುವಜನ ಮತ್ತು ಕ್ರೀಡೆ, ಮೀನುಗಾರಿಕೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಮುಖ್ಯ ಅಥಿತಿಗಳಾಗಿರುವರು. ಉಡುಪಿ ಧರ್ಮಪ್ರಾಂತ್ಯದ ಚಾನ್ಸ್ಲರ್ ಹಾಗೂ ಉಡುಪಿ ವಲಯದ ಪ್ರಧಾನ ಗುರುಗಳಾದ ವಂದನೀಯ ವಲೇರಿಯನ್ ಮೆಂಡೊನ್ಸಾ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಕರ್ನಾಟಕ ಸರಕಾರದ ಕ್ರೈಸ್ತ ಅಭಿವೃದ್ದಿ ಸಮಿತಿಯ ಸದಸ್ಯರಾದ ಪ್ರಶಾಂತ ಜತ್ತನ್ನ ಗೌರವ ಅಥಿತಿಗಳಾಗಿ ಉಪಸ್ಥಿತರಿವುವರು.
ಆಟೋಟಗಳ ವಿವರ ಹೀಗಿದೆ: ವಾಲಿಬಾಲ್, ತ್ರೋಬಾಲ್, ಓಟ, ಹೆಗಲ ಮೇಲೆ ಇನ್ನೊಬರನ್ನ ಹೊತ್ತೊಯ್ಯುವುದು, ಪಿರಮಿಡ್, ರಿಲೇ, ಮೂರು ಕಾಲಿನ ಓಟ, ಹಗ್ಗ ಜಗ್ಗಾಟ.
ವೈಯುಕ್ತಿಕ ಹಾಗೂ ಜೋಡಿ ಸ್ಪರ್ಧೆಯಲ್ಲಿ ಮೊದಲ ಹಾಗೂ ದ್ವಿತೀಯ ಬಹುಮಾನ – ನಗದು ಹಾಗೂ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ತಂಡ ಚಾಂಪಿಯನ್ಶಿಪ್ ಪಟ್ಟವನ್ನು ಸ್ವೀಕರಿಸುವರು.
ಸರಿಸಮಾರು ಈ ಯುವಒಕ್ಕೂಟಕ್ಕೆ 700ಕ್ಕೂ ಮಿಕ್ಕಿ ಯುವಜನರು ಭಾಗವಯಿಸಲಿರುವರು.ಇಡೀ ದಿನದ ಈ ಸಂತೋಷ ಸಂಭ್ರಮದ ಕ್ರೀಡೆಗೆ ಸ್ಥಳೀಯ ಪಂಚಾಯತ್ (ಕಟಪಾಡಿ) ಹಾಗೂ ಅರಕ್ಷಕ ಸಿಬ್ಬಂದಿಯ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಟಪಾಡಿ ಚರ್ಚಿನ ಧರ್ಮಗುರುಗಳಾದ ವಂ ರೋನ್ಸನ್ ಡಿಸೋಜಾ ಸಚೇತರಕಾರದ ವಿಲ್ಫ್ರೇಡ್ ಲೂವಿಸ್ ಉಪಸ್ಥಿತರಿದ್ದರು.