ಇಂದ್ರಾಣಿ ಉಳಿಸಿ ಹೋರಾಟದ ಅಂಗವಾಗಿ ಜನಜಾಗೃತಿ ಅಭಿಯಾನ ಮತ್ತು ಮಾಲಿನ್ಯ ಸಮೀಕ್ಷೆ
ಉಡುಪಿ: ಉಡುಪಿಯ ಜೀವನದಿ ಇಂದ್ರಾಣಿಯನ್ನು ಮತ್ತೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಇಂದ್ರಾಣಿ ಉಳಿಸಿ ಹೋರಾಟದ ಅಂಗವಾಗಿ ಭಾನುವಾರ ಉಡುಪಿಯಲ್ಲಿ ಜನಜಾಗೃತಿ ಅಭಿಯಾನ ಮತ್ತು ಮಾಲಿನ್ಯ ಸಮೀಕ್ಷೆ ನಡೆಯಿತು.
ಈ ಅಭಿಯಾನದಲ್ಲಿ ನದಿಯ ಇಕ್ಕೆಲಗಳಲ್ಲಿರುವ ನೂರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಜಲಮಾಲಿನ್ಯದಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು ಬಳಿಕ ಜಾಗೃತಿ ಅಭಿಯಾನದ ಅಂಗವಾಗಿ ಸ್ಟಿಕ್ಕರ್ ಮತ್ತು ಕರ ಪತ್ರ ವಿತರಿಸಲಾಯಿತು. ಶಾರದಾ ಕಲ್ಯಾಣ ಮಂಟಪ, ಬೈಲಕೆರೆ ,ಕಲ್ಸಂಕ, ಬಡಗುಪೇಟೆ, ಮತ್ತು ಮಠದಬೆಟ್ಟು ಪರಿಸರದಲ್ಲಿ ಅಭಿಯಾನ ನಡೆಯಿತು.
ವಿದ್ಯಾರ್ಥಿಗಳು ಸಮೀಕ್ಷೆ ಮಾಡುವ ವೇಳೆ ಶೌಚಾಲಯಗಳ ತ್ಯಾಜ್ಯ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವ ನಗರಸಭೆಯ ಅಧಿಕಾರಿಗಳ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದು ಸಮೀಕ್ಷೆಯಲ್ಲಿ ಬಯಲಾಗಿದೆ. ನದಿಯ ಪರಿಸರದಲ್ಲಿ ಕೇವಲ ಕಲ್ಸಂಕ ಮತ್ತು ಮಠದಬೆಟ್ಟು ಬಳಿ ಐವತ್ತು ಬಾವಿಗಳ ನೀರು ಕುಡಿಯಲು ಅಯೋಗ್ಯವಾಗಿವೆ. ಕೆಲವು ಬಾವಿಗಳ ನೀರು ಅಸಾಧ್ಯ ವಾಸನೆಯಿಂದ ಕೂಡಿದ್ದು ಜನ ನಿತ್ಯೋಪಯೋಗಕ್ಕೂ ಈ ನೀರು ಬಳಸಲು ಹಿಂಜರಿಯುತ್ತಿದ್ದಾರೆ. ನದಿಯನ್ನು ಶುದ್ಧೀಕರಿಸಿದರೆ ನಗರಭಾಗದ ಬಹುತೇಕ ಭಾಗದ ಜನ ಕುಡಿಯುವ ನೀರಿನ ವಿಚಾರದಲ್ಲಿ ಸ್ವಾವಲಂಬಿಗಳಾಗಲಿದ್ದಾರೆ.
ಹಿರಿಯ ಮಾನವ ಹಕ್ಕು ಹೋರಾಟಗಾರ ರವೀಂದ್ರನಾಥ ಶಾನುಭೋಗ್, ನಗರಸಭಾ ಸದಸ್ಯ ಗಿರೀಶ್ ಅಂಚನ್, ರಾಷ್ಟ್ರೀಯ ಸೇವಾ ಯೋಜನೆಯ ಶಿವಪ್ರಸಾದ್ ಶೆಟ್ಟಿ ಅಂಬಲಪಾಡಿ , ಎಸ್ ಎ ಕೃಷ್ಣಯ್ಯ,ಸಂವೇದನಾ ಫೌಂಡೇಶನ್ ಸ್ಥಾಪಕರಾದ ಪ್ರಕಾಶ್ ಮಲ್ಪೆ ಇಂದ್ರಾಣಿ ಉಳಿಸಿ ಅಭಿಯಾನದ ಸಂಚಾಲಕರಾದ ಶ್ರೀಕಾಂತ್ ಶೆಟ್ಟಿ ಕಾರ್ಕಳ, ಶಶಾಂಕ್ ಶಿವತ್ತಾಯ , ಉದಯ್ ಮಠದಬೆಟ್ಟು, ಆನಂದ್ ಮಠದ ಬೆಟ್ಟು, ಶೈಲೇಂದ್ರ ಶೆಟ್ಟಿ, ನಿತೇಶ್ ರಾವ್, ರಕ್ಷಿತ್ ಭಂಡಾರಿ, ಮೊದಲಾದವರು ಉಪಸ್ಥಿತರಿದ್ದರು.