ಇಂದ್ರಾಣಿ ನದಿ ಪುನಶ್ಚೇತನಕ್ಕೆ ಒಂದಾದ ಯುವಮನಸ್ಸುಗಳು
ಉಡುಪಿ: ಕಸ ಮತ್ತು ತ್ಯಾಜ್ಯದಿಂದ ಮಲಿನವಾಗಿರುವ ಕಲ್ಮಾಡಿ ಸಮೀಪದ ಇಂದ್ರಾಣಿ ನದಿಯನ್ನು ಮಾಲಿನ್ಯ ಮುಕ್ತಗೊಳಿಸುವತ್ತ ಯುವಕರ ಪಡೆ ಸಾರ್ವಜನಿಕವಾದ “ಇಂದ್ರಾಣಿ ಉಳಿಸಿ” ಆಂದೋಲನವನ್ನು ಆರಂಭಿಸಿದೆ.
ಉಡುಪಿಯ ಪರಿಸರಪರ ಯುವಕರಿಂದ ನದಿಯ ಸಂರಕ್ಷಣೆಗಾಗಿ ಅಭಿಯಾನ
ಉಡುಪಿಯಲ್ಲಿ ಹುಟ್ಟಿ ಉಡುಪಿಯಲ್ಲೇ ಕಡಲು ಸೇರುವ ಪುಟ್ಟ ನದಿ ಇಂದ್ರಾಣಿ. ನಗರೀಕರಣ ದುಷ್ಪರಿಣಾಮಕ್ಕೆ ಸಿಲುಕಿ ಈ ಜೀವನದಿ ಈಗ ಅಕ್ಷರಶಃ ಗಟಾರವಾಗಿ ಮಾರ್ಪಟ್ಟಿದೆ. ಜನರು ತ್ಯಾಜ್ಯವನ್ನು ಎಸೆಯುವ ಮೂಲಕ, ಕೊಳಚೆ ನೀರನ್ನು ಹರಿಸುವ ಮೂಲಕ ಇಂದ್ರಾಣಿಯನ್ನು ಅಸಹನೀಯಗೊಳಿಸಿ ಬಿಟ್ಟಿದ್ದಾರೆ.
ನಗರದ ಹೊರಭಾಗದ ಮಲಮೂತ್ರವನ್ನು ಸಂಗ್ರಹಿಸಿ ತಂದು ಹೊಳೆಗೆ ಸುರಿಯುತ್ತಿರುವುದು
ಇದೇ ತೋಡಿಗೆ ಒಳಚರಂಡಿಯ ನೀರೂ ಸೇರುತ್ತಿದೆ. ಈ ನದಿಯ ಸುತ್ತಮುತ್ತ ಸುಮಾರು 1000ಕ್ಕೂ ಅಧಿಕ ಮನೆಗಳಿವೆ. ಇವರಿಗೆ ಕೊಳಚೆ ಎನ್ನುವುದು ನಿತ್ಯ ದರ್ಶನ. ಆನಂತರ ನಿಟ್ಟೂರಿಂದ ಸುಮಾರು ಐದು ಕಿಲೋಮೀಟರ್ ದೂರದವರೆಗೆ ಈ ತೋಡು ಹರಿಯುತ್ತದೆ. ಹಾಗಾಗಿ ಕೊಡಂಕೂರು, ಮೂಡಬೆಟ್ಟು, ಕೊಡವೂರು, ಕಲ್ಮಾಡಿ ಮತ್ತಿತರ ಪ್ರದೇಶದ ತೋಡಿಗೆ ಹತ್ತಿರವಾಗಿ ಬದುಕುತ್ತಿರುವ ಕುಟುಂಬಗಳಿಗೂ ಇದೇ ಶಿಕ್ಷೆಯಾಗಿದೆ.
ನೀರನ್ನು ಪರೀಕ್ಷಿಸಿದಾಗ ಪ್ರಯೋಗಾಲಯದಲ್ಲಿ ಪತ್ತೆಯಾದ ಅಪಾಯಕಾರಿ ಅಂಶಗಳ ವರದಿ
ಈ ನದಿಯನ್ನು ಸ್ವಚ್ಛವಾಗಿ ಹರಿಯಲು ನಾವು ಬಿಟ್ಟರೆ ಉಡುಪಿಯ ಅರ್ಧ ನೀರಿನ ಸಮಸ್ಯೆ ತನ್ನಿಂತಾನೆ ಪರಿಹಾರಗೊಳ್ಳುತ್ತದೆ. ಇದರ ಇಕ್ಕೆಲಗಳಲ್ಲಿರುವ ಇನ್ನೂರಕ್ಕೂ ಅಧಿಕ ಬಾವಿಗಳು ಈಗ ಕಲುಶಿತಗೊಂಡಿವೆ. ಈ ನದಿಯ ಇಕ್ಕೆಲಗಳಲ್ಲಿ ಇದ್ದ ಕೃಷಿ ಭೂಮಿಗಳೆಲ್ಲಾ ನದಿ ಹಾಳಾದ ಮೇಲೆ ಹಡಿಲು ಬಿದ್ದಿವೆ. ಇದರಲ್ಲಿ ನಡೆಯುತ್ತಿದ್ದ ಹಿನ್ನೀರ ಮೀನುಗಾರಿಕೆ ಸಂಪೂರ್ಣವಾಗಿ ನಿಂತೇ ಹೋಗಿದೆ.
ಮತ್ತೊಂದು ಬೆಳಂದೂರು ಕೆರೆಯಾಗುವತ್ತ ಉಡುಪಿಯ ಇಂದ್ರಾಣಿ ನದಿ
ಕಲ್ಸಂಕ ಬಳಿಯಿಂದ ಹಿಡಿದು ಇಂದ್ರಾಣಿ ನದಿಯವರೆಗೆ ತೋಡಿಗೆ ಎಸೆಯುವ ಕಸದಿಂದಾಗಿ ಸಂಪೂರ್ಣ ಚರಂಡಿಯಾಗಿ ನೀರು ಸಂಪೂರ್ಣ ತ್ಯಾಜ್ಯಯುತವಾಗಿ ಬದಲಾಗುತ್ತದೆ. ವಾಸ್ತವವಾಗಿ, ಪ್ರತಿ ಬೇಸಿಗೆಯಲ್ಲಿ, ಕಲ್ಮಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ದುರ್ವಾಸನೆ, ಸೊಳ್ಳೆಗಳ ಹೆಚ್ಚಳ ಮತ್ತು ಬಾವಿಗಳ ಮಾಲಿನ್ಯದ ವಿರುದ್ಧ ಪ್ರತಿಭಟನೆ ನಡೆಸುತ್ತಾರೆ. ಅದರ ಮಾಲಿನ್ಯಕ್ಕೆ ಯಾವುದೇ ರೀತಿಯ ಕೊನೆ ಹಾಡಲು ಬಯಸದೇ ಇರುವುದು ಬೇಸರದ ಸಂಗತಿಯಾಗಿದೆ. ಆದರೆ ತಡವಾದರೂ ಕೂಡ ಕೆಲವೊಂದು ಸಮಾನ ಮನಸ್ಕರ ತಂಡ ಜೊತೆಯಾಗಿ ಸೇರಿ ಸಾಮಾಜಿಕ ಜಾಲತಾಣಗಳ ಮೂಲಕ ಆರಂಭಿಸಿದ ಇಂದ್ರಾಣಿ ಉಳಿಸಿ ಅಭಿಯಾನ ಈಗ ದೊಡ್ಡ ಮಟ್ಟದ ಆಂದೋಲನವಾಗಿ ರೂಪುಗೊಳ್ಳಲು ಆರಂಭವಾಗಿದೆ.
ನಗರಸಭೆಯ ಒಳಚರಂಡಿ ವ್ಯವಸ್ಥೆಯಲ್ಲೇ ನದಿಯನ್ನು ನಾಶ ಮಾಡುವ ಹುನ್ನಾರ..!
ಇಲ್ಲಿಯ ಸ್ಥಳೀಯರ ಪ್ರಕಾರ “ಇದೇ ತೋಡಿನಲ್ಲಿ ನಾವು ಮರಳು ತೆಗೆಯುತ್ತಿದ್ದೆವು. ಇಲ್ಲಿ ಕಟ್ಟ ಕಟ್ಟಿದ ಮೇಲೆ 200-300 ಜನ ಈಜಲು ಬರುತ್ತಿದ್ದರು. ಬಟ್ಟೆಯನ್ನೂ ಒಗೆಯುತ್ತಿದ್ದರು. ಯುಗಾದಿ ಸಮಯ ಮೀನೂ ಹಿಡಿಯುತ್ತಿದ್ದೆವು. ಅಂತಹ ನೀರನ್ನು ಈಗ ಮುಟ್ಟಿದರೆ, ಮೈ ಉರಿ, ಕಜ್ಜಿ ಉಂಟಾಗುತ್ತದೆ’ ಎನ್ನುತ್ತಾರೆ.
ಕೊಡವೂರು ಭಾಗದಲ್ಲಿ ತೀವ್ರ ವಿಷಮಸ್ಥಿತಿಗೆ ತಲುಪಿರುವ ಇಂದ್ರಾಣಿ ಹೊಳೆ
ಉಡುಪಿಯಲ್ಲಿ ಪ್ರತಿ ಬೇಸಿಗೆಯಲ್ಲಿ ಇಡಿ ಉಡುಪಿ ನಗರ ನೀರಿನ ಸಮಸ್ಯೆಯನ್ನು ಎದುರಿಸುತ್ತದೆ. ಅದರ ಗಂಭೀರತೆ ಎಷ್ಟು ಎಂದರೆ ವಾರಕ್ಕೊಮ್ಮೆ ಕೂಡ ನೀರು ಸಿಗದೆ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಅತ್ಯುತ್ತಮವಾದ ಇಂದ್ರಾಣಿ ನದಿಯನ್ನು ನಾವೇ ಮಾಡಿದ ತಪ್ಪಿನಿಂದಾಗಿ ಇಂದು ಕಳೆದುಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಇದೇ ಪರಿಸ್ಥಿತಿ ಮುಂದಾದರೆ ಮುಂದೆ ಕುಡಿಯುವ ನೀರಿಗಾಗಿ ಯುದ್ದವೇ ನಡೆಯುವಂತಹ ಪರಿಸ್ಥಿತಿ ಎದುರಾಗಬಹುದು. ಕೊಡವೂರು ಭಾಗದಲ್ಲಿ ನದಿ ಇಷ್ಟೊಂದು ಕುಲಗೆಟ್ಟು ಹೋಗಲು ನಿಟ್ಟೂರಿನ ಕೊಳಚೆ ಶುದ್ದೀಕರಣ ಘಟಕದಲ್ಲಿ ಕೊಳಚೆ ನೀರನ್ನು ಶುದ್ಧೀಕರಣ ಮಾಡದೇ ಹಾಗೆಯೇ ತೋಡಿಗೆ ಬಿಡುವುದು ಕಾರಣ. ಕೊಳಚೆ ನೀರು ಶುದ್ಧೀಕರಣ ಘಟಕದಲ್ಲಿ ನೀರನ್ನು ಶುದ್ದೀಕರಿಸದೆ ಹಾಗೆಯೇ ಬಿಡುತ್ತಿದ್ದಾರೆ. ಅದರಿಂದಾಗಿ ಇಡೀ ಕೊಡವೂರು, ಕಲ್ಮಾಡಿಯ ಊರೇ ಹಾಳಾಗಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ಸಮಾನಮನಸ್ಕರಾದ ನಾವೆಲ್ಲಾ ಸೇರಿ ಇಂದ್ರಾಣಿ ಉಳಿಸಿ ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ನಾವು ಈ ನದಿಯನ್ನು ಅದರ ಮೂಲ ಸ್ವರೂಪಕ್ಕೆ ತಂದದ್ದೇ ಆದರಿಂದ ಬೇಸಿಗೆಯಲ್ಲಿ ನಗರದ ಅರ್ಧದಷ್ಟು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸುತ್ತದೆ” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ.
ಇದರ ನೀರು ಕುಡಿದು ಸಾಯುತ್ತಿವೆ ಜಾನುವಾರುಗಳು
ಅದರ ಮೊದಲ ಭಾಗವಾಗಿ ಇದೇ ಭಾನುವಾರ ಜುಲೈ 28ರಂದು ಬೆಳಿಗ್ಗೆ 9.00ಗಂಟೆಗೆ ಇಂದ್ರಾಣಿ ನದಿ ಉಗಮವಾಗುವ ಇಂದ್ರಾಳಿ ದೇವಸ್ಥಾನದ ಬಳಿ ಅಭಿಯಾನಕ್ಕೆ ಚಾಲನೆ ಸಿಗಲಿರುವುದು. ಈ ಕಾರ್ಯಕ್ರಮಕ್ಕೆ ಉಭಯ ಜಿಲ್ಲೆಯ ಪರಿಸರಪರ ಹೋರಾಟಗಾರರು ಸಾಥ್ ನೀಡಲಿದ್ದಾರೆ. ಬಳಿಕ ಇಲ್ಲಿಂದ ಎಲ್ಲರೂ ವಿಪ್ರಶ್ರೀ ಸಭಾಭವನ ಕೊಡವೂರು ಇಲ್ಲಿ ಸೇರಿಇಂದ್ರಾಣಿ ನದಿಯನ್ನು ಮತ್ತೆ ಮೂಲಸ್ವರೂಪಕ್ಕೆ ತರುವ ನಿಟ್ಟಿನಲ್ಲಿ ಸಭೆ ನಡೆಸಲಿದ್ದಾರೆ. ಈ ಹಿಂದೆ ಈ ನದಿಯ ಸಂರಕ್ಷಣೆಗಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಸದ್ಯ ಈ ಚಟುವಟಿಕೆಗಳು ನಿಂತು ಹೋಗಿವೆ. ಆಳುವ ವರ್ಗವನ್ನು ಎಚ್ಚರಿಸಲು ಮತ್ತೆ ಈ ಹೋರಾಟಕ್ಕೆ ಚಾಲನೆ ನೀಡುವುದು ಅನಿವಾರ್ಯವಾಗಿದೆ. ಜನಜಾಗೃತಿಯ ಜೊತೆಗೆ ಕಾನೂನಾತ್ಮಕ ಹೋರಾಟವನ್ನೂ ನಾವು ನಡೆಸಲಿದ್ದೇವೆ. ಈ ನದಿಯ ಮಾಲೀನ್ಯವು ನೀರಿನ ಸಮಸ್ಯೆ, ಆರೋಗ್ಯ ಸಮಸ್ಯೆ,ಪ್ರವಾಸೋದ್ಯಮಕ್ಕೆ ಹಿನ್ನಡೆ, ಪ್ರಕೃತಿ ನಾಶಕ್ಕೆ ಕಾರಣವಾಗಿದೆ. ಈಗಲೇ ಎಚ್ಚೆತ್ತುಕೊಂಡರೆ ಆಗಿರುವ ಪ್ರಮಾದವನ್ನು ಸರಿಪಡಿಸಬಹುದು ಎಂದು ಅವರು ತಿಳಿಸಿದ್ದಾರೆ.