ಇಂದ್ರಾಳಿ ಸೇತುವೆ ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳು ಕಾರಣ – ರಘುಪತಿ ಭಟ್
ಉಡುಪಿ: ಇಂದ್ರಾಳಿ ಸೇತುವೆ ಕಾಮಗಾರಿ ಬಾಕಿ ಉಳಿಯಲು ಜನಪ್ರತಿನಿಧಿಗಳು ಕಾರಣರಲ್ಲ ಬದಲಾಗಿ ತಾಂತ್ರಿಕ ಸಮಸ್ಯೆ ಮತ್ತು ಅಧಿಕಾರಿಗಳಿಂದಾಗಿ ಸೇತುವೆ ಕಾಮ ಗಾರಿ ವಿಳಂಬ ವಾಗಿದೆ ಎಂದು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.
ಅವರು ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಡುಪಿಯಿಂದ ಹಿರಿಯಡ್ಕವರೆಗೂ ಚತುಷ್ಪಥ ಕಾಮ ಗಾರಿ ಮಾಡಲಾಗಿದ್ದು, ಈ ಇಂದ್ರಾಳಿ ಸೇತುವೆಯಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂದರು.
ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿರುವ ಕಾಂಗ್ರೆಸ್, ಉಡುಪಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಜಿಲ್ಲೆಯಲ್ಲಿ ಆಗಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಬಿಜೆಪಿ ಸರಕಾರದ ಅವಧಿಯಲ್ಲಿ. ಈ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿದ್ಧ ಇದ್ದೇವೆ. ಕಾಂಗ್ರೆಸ್ನವರು ದಾಖಲೆ ಸಮೇತ ಚರ್ಚೆಗೆ ಬರಲಿ ಎಂದು ಅವರು ಸವಾಲು ಹಾಕಿದರು.
ಈ ಬಾರಿಯ ಚುನಾವಣೆ ಸಂದರ್ಭ ಗೋ ಬ್ಯಾಕ್ ಶೋಭಾ ಅಭಿಯಾನ ನಡೆಸಿರುವುದು ಬಿಜೆಪಿ ಕಾರ್ಯ ಕರ್ತರಲ್ಲ. ಈ ಅಭಿಯಾನಕ್ಕೆ ಕಾಂಗ್ರೆಸ್ ಕುಮ್ಮಕ್ಕು ಹಾಗೂ ಪ್ರೇರಣೆ ಕೊಟ್ಟಿದೆ ಎಂದು ರಘುಪತಿ ಭಟ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋಕ್ ಕುಮಾರ್ ಕುಂದಾಪುರ, ಮುಖಂಡರಾದ ಗೀತಾಂಜಲಿ ಸುವರ್ಣ, ಶ್ರೀಶ ನಾಯಕ್, ಶಿವಕುಮಾರ್ ಅಂಬಲಪಾಡಿ, ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.