ಇತಿಹಾಸವನ್ನು ಅರಿಯದ ಸಮಾಜ ತುಂಬಾ ಮುಂದೆ ಹೋಗಲು ಸಾಧ್ಯವಿಲ್ಲ-ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್
ಮಂಗಳೂರು: ಇತಿಹಾಸವನ್ನು ಅರಿಯದ ಸಮಾಜ ತುಂಬಾ ಮುಂದೆ ಹೋಗಲು ಸಾಧ್ಯವಿಲ್ಲ. ರಾಣಿ ಅಬ್ಬಕ್ಕನಂತಹ ವೀರ ಮಹಾನೀಯರ ಚರಿತ್ರೆಗಳನ್ನು ತಿಳಿಸಿ, ಅವರ ತತ್ವಗಳನ್ನು ಅರಿತು ಅಳವಡಿಕೊಳ್ಳುವ ಮನೋಭಾವವನ್ನು ಯುವ ಪೀಳಿಗೆ ಹೊಂದುವಂತಾಗಬೇಕು ಎಂದು ದ.ಕ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದರು.
ಗುರುವಾರ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ರಾಣಿ ಅಬ್ಬಕ್ಕ ವಿಚಾರಗೋಷ್ಠಿ-ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಣಿ ಅಬ್ಬಕ್ಕ ಬ್ರಿಟೀಷರ ವಿರುದ್ಧ ಹೋರಾಡಿದ ರೀತಿ, ಆಕೆಯ ಸಾಮ್ರಾಜ್ಯವನ್ನು ಉಳಿಸಿಕೊಂಡು ಬಂದ ದಾರಿ, ಆಕೆಯ ಶ್ರಮ, ಧೈರ್ಯ ಹೀಗೆ ಅನೇಕ ವಿಚಾರಗಳನ್ನು ಇಂತಹ ಕವಿಗೋಷ್ಠಿ-ವಿಚಾರಗೋಷ್ಠಿಗಳಲ್ಲಿ ನಡೆಸಿ, ಶಾಲಾ, ಕಾಲೇಜುಗಳಿಂದಲೇ ಇತಿಹಾಸದ ಹುರುಪನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಬೇಕು ಎಂದರು.
ಪ್ರತೀ ವರ್ಷವು ಅಬ್ಬಕ್ಕ ಉತ್ಸವವು ವಿನೂತನವಾಗಿ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಮೂಡಿಬರಬೇಕು. ಅಬ್ಬಕ್ಕ ಉತ್ಸವ ಅಂಗವಾಗಿ ಶಾಲಾ, ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು, ಏರ್ಪಡಿಸಲಾಗಿದ್ದು, ಉತ್ಸವ ಆಚರಣೆಯ ವಿಚಾರದಾರೆಗಳು ಸಮಾಜಕ್ಕೆ ತಲುಪಬೇಕು ಎಂದು ಹೇಳಿದರು.
ಯುವಪೀಳಿಗೆಯಲ್ಲಿ ದೇಶಪ್ರೇಮವು ನೈಸರ್ಗಿಕವಾಗಿ ಬೆಳೆಯಬೇಕಾದರೆ ಇತಿಹಾಸವುಳ್ಳ ಅನೇಕ ಸಾಧಕರ ಸಾಧನೆಗಳನ್ನು, ಅವರ ಚರಿತ್ರೆಗಳನ್ನು ಇಂತಹ ವಿಚಾರಗೋಷ್ಠಿಗಳನ್ನು ನಡೆಸಿ ತಿಳಿಸಿ ಕೊಡುವ ಪ್ರಯತ್ನವಾಗಬೇಕು. ಪ್ರತೀ ವಿದ್ಯಾರ್ಥಿಯು ಈ ವಿಚಾರಗೋಷ್ಠಿ-ಕವಿಗೋಷ್ಠಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ದ.ಕ ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ಹೇಳಿದರು.
ರಾಣಿ ಅಬ್ಬಕ್ಕನ ಜೀವನ ಚರಿತ್ರೆ ಕೇವಲ ದ.ಕ ಜಿಲ್ಲೆಗೆ ಮಾತ್ರ ಸೀಮಿತವಾಗಿರದೆ ರಾಜ್ಯದ ಮೂಲೆ ಮೂಲೆಗೆ ಇಂತಹ ಅನೇಕ ಸಾಧಕರ ಇತಿಹಾಸ ಪಸರಿಸಬೇಕು. ಅಬ್ಬಕ್ಕ ರಾಣಿಯ ಮೌಲ್ಯಗಳನ್ನು ಯುವಪೀಳಿಗೆಗೆ ತಿಳಿಸಬೇಕು. ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಇತಿಹಾಸ ಅಧ್ಯಯನ ಮಾಡುತ್ತಿರುವ ಅನೇಕ ಪ್ರಾಧ್ಯಾಪಕರುಗಳನ್ನು ಕರೆದು ಇಂತಹ ವಿಚಾರಗೋಷ್ಠಿಗಳನ್ನು ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದ.ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಸೆಲ್ವಮಣಿ ಆರ್ ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ, ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಉದಯ ಕುಮಾರ್ ಎಂ, ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ. ಎಂ ಕೊಟ್ರೇಶ್ ಉಪಸ್ಥಿತರಿದ್ದರು.