Home Mangalorean News Kannada News ಇಬ್ಬರು ಕುಖ್ಯಾತ ದನಕಳ್ಳರ ಬಂಧಿಸಿದ ಸಿಸಿಬಿ ಪೋಲಿಸರು

ಇಬ್ಬರು ಕುಖ್ಯಾತ ದನಕಳ್ಳರ ಬಂಧಿಸಿದ ಸಿಸಿಬಿ ಪೋಲಿಸರು

Spread the love

ಇಬ್ಬರು ಕುಖ್ಯಾತ ದನಕಳ್ಳರ ಬಂಧಿಸಿದ ಸಿಸಿಬಿ ಪೋಲಿಸರು

ಮಂಗಳೂರು: ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದನಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಕುಖ್ಯಾತ ಆರೋಪಿಗಳಿಬ್ಬರನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಮೂಡಬಿದ್ರಿ ಅಲಂಗಾರು ನಿವಾಸಿ ಅಬ್ದುಲ್ ರಝಾಕ್ @ ದಡ್ಡಿ ರಝಾಕ್, ಪ್ರಾಯ(28), ಮತ್ತು ಮಿಜಾರು ನಿವಾಸಿ ಮೊಹಮ್ಮದ್ ಅರೀಫ್, ಪ್ರಾಯ(26) ಎಂದು ಗುರುತಿಸಲಾಗಿದೆ.

ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಪ್ರಿಲ್ 13 ರಂದು ಮೂಡು ಮಾರ್ನಾಡು ಎಂಬಲ್ಲಿನ ಮನೆಯ ಹಟ್ಟಿಯಲ್ಲಿ ಕಟ್ಟಿದ್ದ 2 ದನಗಳನ್ನು ಕಾರಿನಲ್ಲಿ ಕಳವು ಮಾಡಿಕೊಂಡು ಹೋಗುತ್ತಿದ್ದುದ್ದನ್ನು ಕಂಡ ಅಲ್ಲಿಯ ಜನರು ಕಾರಿನಲ್ಲಿ ದನಕಳ್ಳರನ್ನು ಹಿಂಬಾಲಿಸಿ ಹೋಗುತ್ತಿದ್ದ ಸಮಯ ದನಕಳ್ಳರು ಕಾರಿನಲ್ಲಿದ್ದವರಿಗೆ ತಲವಾರು ತೋರಿಸಿ ಅವರ ಕಾರಿನ ಮುಂಭಾಗಕ್ಕೆ ಹಾಗೂ ಹೆಡ್ ಲೈಟ್ ಗೆ ತಲವಾರಿನಿಂದ ಕಡಿದು ಬೆದರಿಕೆ ಹಾಕಿ ಕಳ್ಳತನ ಮಾಡಿದ ದನದೊಂದಿಗೆ ಪರಾರಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಡಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಈಗಾಗಲೇ ಈ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳಾದ ಮೊಹಮ್ಮದ್ ಮನ್ಸೂರ್ @ ಮನ್ಸೂರ್ ಅದ್ಯಪಾಡಿ @ ಮುಖ್ತಾರ್ ಜುನೈದ್ @ ಜುನ್ನಿ ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿದ್ದರು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಪ್ರಮುಖ ಆರೋಪಿಗಳಾದ ಅಬ್ದುಲ್ ರಝಾಕ್ ಮತ್ತು ಮೊಹಮ್ಮದ್ ಅರೀಫ್ ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿರುತ್ತಾರೆ. ಆರೋಪಿಗಳಿಬ್ಬರೂ ಕುಖ್ಯಾತ ದನಕಳ್ಳರಾಗಿದ್ದು, ಆರೋಪಿಗಳ ಪೈಕಿ ಅಬ್ದುಲ್ ರಝಾಕ್ ಎಂಬಾತನ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಕಳಸ, ಬಾಳೂರು, ಬಾಳೆಹೊನ್ನೂರು, ಜಯಪುರ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದನ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಹಾಗೂ ಬಜ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ಹೀಗೆ ಒಟ್ಟು 9 ಪ್ರಕರಣ ದಾಖಲಾಗಿರುತ್ತದೆ.

ಆರೋಪಿ ಮೊಹಮ್ಮದ್ ಅರೀಫ್ ಎಂಬಾತನ ವಿರುದ್ಧ ಉಡುಪಿ ಜಿಲ್ಲೆಯ ಹೆಬ್ರಿ, ಅಜೆಕಾರು, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ, ಕೊಡಗು ಜಿಲ್ಲೆಯ ಸೋಮವಾರಪೇಟೆ, ಶನಿವಾರಸಂತೆ, ಕುಶಾಲನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ದನಕಳ್ಳತನಕ್ಕೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದ್ದು, ಹೀಗೆ ಒಟ್ಟು 16 ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳು ಇನ್ನೂ ಹಲವು ದನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿಯಿದ್ದು, ತನಿಖೆ ಮುಂದುವರಿದಿದೆ.

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀನಿವಾಸ.ಕೆ, ಪಿಎಸ್ಐ ಯವರಾದ ಶ್ಯಾಮ್ ಸುಂದರ್, ಹೆಚ್.ಡಿ ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಗಳು ಭಾಗವಹಿಸಿರುತ್ತಾರೆ.


Spread the love

Exit mobile version