ಇಸ್ಲಾಮಿಕ್ ಭಯೋತ್ಪಾದನೆ ನಿಗ್ರಹಕ್ಕೆ ಅಮೆರಿಕಾ- ಭಾರತ ಜಂಟಿ ಹೋರಾಟ: ಡೊನಾಲ್ಡ್ ಟ್ರಂಪ್
ಅಹಮದಾಬಾದ್: ವಿಶ್ವದಾದ್ಯಂತ ಮನುಷ್ಯ ಜೀವನಕ್ಕೆ ಮಾರಕವಾಗಿ ಪರಿಣಮಿಸಿರುವ ಭಯೋತ್ಪಾದನೆ ವಿರುದ್ಧ ಭಾರತ- ಅಮೆರಿಕಾ ಜಂಟಿಯಾಗಿ ಹೋರಾಟ ನಡೆಸಲಿವೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಮೊಟೆರಾ ಕ್ರೀಡಾಂಗಣದಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ದೇಶಗಳು ಭದ್ರತೆಗೆ ಆದ್ಯತೆ ನೀಡಲಿದ್ದು, ಅಮೆರಿಕಾ ತನ್ನ ಸಿದ್ದಾಂತಗನುಗುಣವಾಗಿ ಕಾರ್ಯನಿರ್ವಹಿಸಲಿದೆ. ಜಗತ್ತಿನಾದ್ಯಂತ ಭೀತಿಗೆ ಕಾರಣವಾಗಿರುವ ಭಯೋತ್ಪಾದನೆ ಮಟ್ಟಹಾಕಲು ವಿಶೇಷ ಹೋರಾಟ ನಡೆಸುವುದಾಗಿ ತಿಳಿಸಿದರು.
ಇಸ್ಲಾಮಿಕ್ ಉಗ್ರರ ಬೆದರಿಕೆಯಿಂದ ನಾಗರಿಕನ್ನು ರಕ್ಷಿಸಲು ಉಭಯ ದೇಶಗಳು ಬದ್ದವಾಗಿವೆ. ತಮ್ಮ ಆಳ್ವಿಕೆಯಲ್ಲಿ ಐಎಸ್ ಐಎಸ್ ಉಗ್ರರ ಮಟ್ಟಹಾಕಲು ಅಮೆರಿಕಾ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಪ್ರಸ್ತುತ ಶೇ. 100 ರಷ್ಟು ಐಎಸ್ ಐಸ್ ಉಗ್ರರು ನಾಶವಾಗಿದ್ದಾರೆ. ಉಗ್ರ ಅಲ್ ಬಾಗ್ದಾದಿಯನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಹೇಳಿದರು.
ರಕ್ಷಣೆಯಲ್ಲಿ ಸಹಕಾರವನ್ನು ಮುಂದುವರೆಸಲಾಗುವುದು, ಭಾರತಕ್ಕೆ ಅತ್ಯುತ್ತಮ ಮಿಲಿಟರಿ ಉಪಕರಣಗಳನ್ನು ಪೂರೈಸಲು ಅಮೆರಿಕಾ ಎದುರು ನೋಡುತ್ತಿದೆ. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು, 3 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಉಪಕರಣಗಳ ಒಪ್ಪಂದಕ್ಕೆ ನಾಳೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಇಲ್ಲಿನ ಅತಿಥ್ಯ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ನಮ್ಮ ಹೃದಯದಲ್ಲಿ ಭಾರತಕ್ಕೆ ವಿಶೇಷ ಸ್ಥಾನವಿದೆ. ಶೋಲೆ, ಡಿಡಿಎಲ್ ಜೆ, ಬಂಗಾರದಂತಹ ಬಾಲಿವುಡ್ ಸಿನಿಮಾವನ್ನು ಇಡೀ ವಿಶ್ವವೇ ನೋಡಿ ಖುಷಿಪಟ್ಟಿದೆ. ಸಚಿನ್ ತೆಂಡೊಲ್ಕರ್, ವಿರಾಟ್ ಕೊಹ್ಲಿಯಂತಹ ಅದ್ಬುತ ಕ್ರಿಕೆಟ್ ಆಟಗಾರರು ಭಾರತದಲ್ಲಿದ್ದಾರೆ. ಚಹಾ ಮೂಲಕ ಬದುಕು ಆರಂಭಿಸಿದ ಪ್ರಧಾನಿ ಮೋದಿಯನ್ನು ಎಲ್ಲರೂ ಪ್ರೀತಿಸುತ್ತಾರೆ. ಅವರೊಬ್ಬ ಸದೃಢ ಮನುಷ್ಯರಾಗಿದ್ದಾರೆ ಎಂದು ಹೊಗಳಿದರು.
ಇದಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಅಮೆರಿಕ ನಡುವಿನ ಗೆಳೆತನ ಸುಧೀರ್ಘವಾಗಿದ್ದು, ಇಂದು ಉಭಯ ದೇಶಗಳ ನಡುವಿನ ಬಾಂಧವ್ಯದಲ್ಲಿ ಹೊಸ ಅಧ್ಯಾಯ ಬರೆಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಹೊಸ್ಟನ್ ನಲ್ಲಿ ಹೌಡಿ ಮೋದಿ ಮೂಲಕ ನನ್ನಗೆ ಸ್ವಾಗತ ನೀಡಿದ್ದರು. ಇಂದು ನಮಸ್ತೆ ಟ್ರಂಪ್ ಮೂಲಕ ಧನ್ಯವಾದ ಆರ್ಪಿಸಿರುವುದಾಗಿ ತಿಳಿಸಿದರು.