ಇ ಆಟೋ ರಿಕ್ಷಾಗಳ ಸಂಚಾರದ ಕುರಿತಂತೆ ಕೇಂದ್ರ ಸರಕಾರದ ಮಾರ್ಗಸೂಚಿ ಹಾಗೂ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಆದೇಶ – ಮುಲ್ಲೈ ಮುಗಿಲನ್
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇ ಆಟೋ ರಿಕ್ಷಾಗಳ ಸಂಚಾರದ ಕುರಿತಂತೆ ಕೇಂದ್ರ ಸರಕಾರದ ಮಾರ್ಗಸೂಚಿ ಹಾಗೂ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಕಾನೂನು ಚೌಕಟ್ಟಿನೊಳಗೆ ಕಳೆದ ಜುಲೈ 26ರಂದು ಆದೇಶ ಹೊರಡಿ ಸಲಾಗಿದೆ. ಇದನ್ನು ಬದಲಾಯಿಸಲು ತನಗೆ ಅಧಿಕಾರವಿಲ್ಲ. ಆದರೆ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಪಷ್ಟ ಪಡಿಸಿದ್ದಾರೆ. ಇ ಆಟೋ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆಂದು ಆರೋಪಿಸಿ ಇತ್ತೀಚೆಗೆ ಪೆಟ್ರೋಲ್, ಸಿಎನ್‌ಜಿ, ಎಲ್‌ಪಿಜಿ ಆಟೊ ಚಾಲಕರು ಪ್ರತಿಭಟನೆ ನಡೆಸಿದ ಸಂದರ್ಭ ನೀಡಿದ್ದ ಭರವಸೆಯಂತೆ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಲಾದ ರಿಕ್ಷಾ ಚಾಲಕ ಮಾಲಕರ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಆದೇಶದಲ್ಲಿರುವ ತಾಂತ್ರಿಕ ತೊಂದರೆಗಳ ಬಗ್ಗೆ ಲಿಖಿತ ಮನವಿ ನೀಡಿದಲ್ಲಿ ಅದನ್ನು ಸರಿಪಡಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದ ಜಿಲ್ಲಾಧಿಕಾರಿ, ಮಂಗಳೂರು ನಗರದಲ್ಲಿಯೂ ಆಟೋರಿಕ್ಷಾಗಳ ಸಂಖ್ಯೆ, ಜನಸಂಖ್ಯೆ, ವಾಹನ ದಟ್ಟಣೆ ಆಧಾರದಲ್ಲಿ ಇ ಆಟೋಗಳಿಗೆ ನಿರ್ಬಂಧ ಹೇರಬೇಕು ಎಂಬ ನಿಟ್ಟಿನಲ್ಲಿ ರಿಕ್ಷಾ ಸಂಘದವರು ನೀಡುವ ಮನವಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು. ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲೂ ಇ ಆಟೋಗಳಿಗೆ ತಮಿಳುನಾಡು ಮಾದರಿಯಲ್ಲಿ ಪರವಾನಿಗೆ ನೀಡುವ ಬಗ್ಗೆ ಮನವಿ ಸಲ್ಲಿಕೆಯಾಗಿದೆ. ನಗರದಲ್ಲಿರುವ ಆಟೋರಿಕ್ಷಾಗಳಿಗೆ ಪೂರಕವಾಗಿ ರಿಕ್ಷಾ ನಿಲ್ದಾಣಗಳಿಲ್ಲ ಎಂಬ ಬೇಡಿಕೆಯ ಕುರಿತಂತೆ ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಗೆ ರಿಕ್ಷಾ ನಿಲ್ದಾಣಗಳನ್ನು ಹೆಚ್ಚಿಸಲು ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯ ಆರಂಭದಲ್ಲಿ ವಿವಿಧ ರಿಕ್ಷಾ ಚಾಲಕ ಮಾಲಕರ ಸಂಘಗಳ ಪ್ರತಿನಿಧಿಗಳ ಅಹವಾಲುಗಳನ್ನು ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ಅವರು, ಮೋಟಾರು ವಾಹನ ಕಾಯಿದೆ 66 ಪ್ರಕಾರ ಎಲ್‌ಪಿಜಿ ಮತ್ತು ಸಿಎನ್‌ಜಿ ವಾಹನಗಳಿಗೆ ಪರವಾ ನಗಿ ನೀಡಲಾಗುತ್ತದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ 1997ರ ಆದೇಶ ಮತ್ತು 1998ರ ತಿದ್ದುಪಡಿ ಅಂದಿನ ಜಿಲ್ಲಾಧಿಕಾರಿಗು ವಾಹನಗಳ ಮಿತಿಯನ್ನು ನಿರ್ಬಂಧಿಸಲು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 115ರಡಿ ವಲಯ ಪರಿಕಲ್ಪನೆಯಡಿ ಆಟೋ ರಿಕ್ಷಾಗಳಿಗೆ ವಲಯ 1 (ನಗರ)ಹಾಗೂ ವಲಯ 2 (ಗ್ರಾಮಾಂತರ) ರಂತೆ ಪರವಾನಿಗೆ ನೀಡುವ ಅವಕಾಶ ಕಲ್ಪಿಸಿದ್ದರು. ಕೆಲ ವರ್ಷಗಳ ಹಿಂದೆ ಎಲೆಕ್ಟ್ರಿಕ್ ಆಟೊಗಳು ರಸ್ತೆಗಿಳಿಯಲು ಆರಂಭವಾದಾಗ ಅದೇ ವಲಯ 1-2 ನಿಯಮ ಇ-ಆಟೊಗಳಿಗೂ ಅನ್ವಯ ಮಾಡಲಾಗಿತ್ತು. ಇ-ಆಟೊಗಳಿಗೆ ದ.ಕ.ದಲ್ಲಿ ಮಾತ್ರ ಈ ನಿರ್ಬಂಧ ಇದ್ದುದನ್ನು ಪ್ರಶ್ನಿಸಿ ಇ-ಆಟೋ ಮಾಲಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ಕಾನೂನಾತ್ಮಕವಾಗಿ ಆದೇಶ ಹೊರಡಿಸುವಂತೆ ಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಆದೇಶ ಪಾಲನೆ ಮಾಡಲಾಗಿದೆ ಎಂದು ಅವರು ಮನವರಿಕೆ ಮಾಡಲೆತ್ನಿಸಿದರು.
ಸಭೆಯ ಆರಂಭದಲ್ಲಿ ಉಪಸ್ಥಿತರಿದ್ದ ಶಾಸಕ ವೇದವ್ಯಾಸ ಕಾಮತ್‌ರವರು ಜಿಲ್ಲೆಯಲ್ಲಿ ಆಟೋ ರಿಕ್ಷಾ ಚಾಲಕರ ಮಧ್ಯೆ ಉಂಟಾಗಿರುವ ಗೊಂದಲದಿಂದ ಜನಪ್ರತಿನಿಧಿಯಾಗಿ ತಾನು ಉಪಕಾರ ಮಾಡಿ ಬೈಗುಳ ತಿನ್ನುವ ಪರಿಸ್ಥಿತಿ ಎದುರಾಗಿದೆ. ಈ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ 25ಕ್ಕೂ ಅಧಿಕ ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದೇನೆ. ಸಂಬಂಧಪಟ್ಟವರ ಜತೆ ಚರ್ಚಿಸಿದ್ದೇನೆ. ಜನರ ಭಾವನೆಗಳಿಗೆ ತೊಂದರೆ ಆಗದ ರೀತಿಯಲ್ಲಿ ಕಾನೂನು ಚೌಕಟ್ಟಿನಲ್ಲಿ ಗೊಂದಲವನ್ನು ಜಿಲ್ಲಾಧಿಕಾರಿ ಪರಿಹರಿಸುವಂತೆ ಆಗ್ರಹಿಸಿ ತೆರಳಿದರು. ಜಿಲ್ಲಾಧಿಕಾರಿ ನೀಡಿರುವ ಆದೇಶವನ್ನು ಹಿಂಪಡೆಯಬೇಕು ಎಂದು ವಿವಿಧ ಸಂಘಟನೆಗಳ ಪರವಾಗಿ ವಿಷ್ಣುಮೂರ್ತಿ, ಸುನಿಲ್ ಕುಮಾರ್ ಬಜಾಲ್, ಅಶೋಕ್ ಕುಮಾರ್, ಲೋಕೇಶ್ ಶೆಟ್ಟಿ ಮೊದಲಾದವರು ಒತ್ತಾಯಿಸಿದರು.
ಜಿಲ್ಲೆಯ ಗ್ರಾಮಾಂತರ ಭಾಗದ ಆಟೋರಿಕ್ಷಾಗಳ ಸಂಘಗಳ ಪರವಾಗಿ ಮಾತನಾಡಿದ ಪ್ರತಿನಿಧಿಗಳು ಜಿಲ್ಲೆಯಲ್ಲಿರುವ ವಲಯ ಪರಿಕಲ್ಪನೆಯನ್ನು ತೆಗೆಯಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಬಳಿಕ ರಿಕ್ಷಾ ಚಾಲಕರ ಸಂಘಟನೆಗಳ ಕೆಲ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸುತ್ತಾ, ರಿಕ್ಷಾ ಚಾಲಕರ ಹಿತ ಕಾಯುವ ನಿಟ್ಟಿನಲ್ಲಿ ಯಾವುದೇ ತೀರ್ಮಾನವಾಗಿಲ್ಲ ಎಂದರು. ಸಭೆಯಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಎಸ್ಪಿ ಯತೀಶ್, ಮನಪಾ ಆಯುಕ್ತ ಆನಂದ್, ಆರ್‌ಟಿಒ ಶ್ರೀಧರ್ ಮಲ್ಲಾಡ್ ಉಪಸ್ಥಿತರಿದ್ದರು.