ಇ- ಮಾರ್ಕೆಟ್ ನಲ್ಲಿ ಖರೀದಿಸಿ- ಅಪರ ಜಿಲ್ಲಾಧಿಕಾರಿ

Spread the love

ಇ- ಮಾರ್ಕೆಟ್ ನಲ್ಲಿ ಖರೀದಿಸಿ- ಅಪರ ಜಿಲ್ಲಾಧಿಕಾರಿ

ಉಡುಪಿ : ಸರಕಾರದ ಎಲ್ಲಾ ಇಲಾಖೆಗಳು ಇನ್ನು ಮುಂದೆ ತಮ್ಮ ಕಚೇರಿ ಕೆಲಸಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಗವರ್ನಮೆಂಟ್ ಇ-ಮಾರ್ಕೆಟ್ (ಜೆಮ್) ನಲ್ಲಿ ಖರೀದಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ತಿಳಿಸಿದ್ದಾರೆ.

ಅವರು ಮಂಗಳವಾರ ರಜತಾದ್ರಿಯ ಜಿ.ಪಂ. ಸಭಾಂಗಣದಲ್ಲಿ, ಜಿಲ್ಲೆಯ ಎಲ್ಲಾ ಇಲಾಖೆಗಳಿಗೆ ಗವರ್ನಮೆಂಟ್ ಇ-ಮಾರ್ಕೆಟ್ ಬಳಕೆ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಎಲ್ಲಾ ಇಲಾಖೆಗಳು ಗವರ್ನಮೆಂಟ್ ಇ-ಮಾರ್ಕೆಟ್ ನಲ್ಲಿ ಅತ್ಯಂತ ಕಡಿಮೆ ದರದಲ್ಲಿ, ಉತ್ತಮ ಗುಣಮಟ್ಟದ ವಸ್ತುಗಳನ್ನು ಖರೀದಿಸಲು ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ಯಾವುದೇ ಮಧ್ಯವರ್ತಿ ಅಥವಾ ಭ್ರಷ್ಟಾಚಾರಕ್ಕೆ ಆಸ್ಪದ ಇಲ್ಲದೇ ವ್ಯವಹಾರ ನಡೆಯುವುದರಿಂದ ಅತ್ಯಂತ ಪಾರದರ್ಶಕವಾಗಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಅಲ್ಲದೆ ಇಲ್ಲಿಂದ ಖರೀದಿಸುವ ವಸ್ತುಗಳನ್ನು ನಿಗದಿತ ಅವಧಿಯೊಳಗೆ ಸಂಬಂದüಪಟ್ಟ ಕಂಪೆನೆಗಳಿಗೆ ಹಿಂದಿರುಗಿಸುವ ವ್ಯವಸ್ಥೆ ಕೂಡಾ ಇದ್ದು, ಎಲ್ಲಾ ಇಲಾಖೆಗಳು ಇದರ ಪ್ರಯೋಜನ ಪಡೆಯುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಕಾರ್ಯಾಗಾರದಲ್ಲಿ ತರಬೇತಿ ಕೇಂದ್ರದ ಈ ಕಾಮರ್ಸ್ ಇಲಾಖೆಯ ಸಲ್ಡಾನ ಅವರು ಮಾತನಾಡಿ, 2016 ರಲ್ಲಿ ಆರಂಭಗೊಂಡಿರುವ ಈ ವೆಬ್ ಮೂಲಕ, ಕೇಂದ್ರ ಸರಕಾರದ ಹಲವು ಇಲಾಖೆಗಳು ಈಗಾಗಲೇ ಖರೀದಿ ನಡೆಸುತ್ತಿವೆ, ಪ್ರಾರಂಭದಲ್ಲಿ 1000 ವಸ್ತುಗಳ ಖರೀದಿ ಇದ್ದು ಪ್ರಸ್ತುತ 17000 ಕ್ಕೂ ಹೆಚ್ಚು ವಸ್ತುಗಳು ಇದರಲ್ಲಿ ದೊರೆಯಲಿವೆ, ಅಲ್ಲದೇ ಸರಬರಾಜುದಾರರರೂ ಸಹ ತಮ್ಮ ಸರಕುಗಳನ್ನು ಮಾರಾಟ ಮಾಡಲು ಉತ್ಸುಕರಾಗಿರುವ ಕಾರಣ ಹಲವು ಅತ್ಯಂತ ಕಡಿಮೆ ಬೆಲೆಯಲ್ಲಿ ವಸ್ತುಗಳು ದೊರೆಯುತ್ತಿವೆ ಎಂದು ತಿಳಿಸಿದರು.
ತರಬೇತಿಯಲ್ಲಿ ಕೇಂದ್ರದ ಇ ಕಾಮರ್ಸ್ ಇಲಾಖೆಯ ಅಂಬರೀಷ್, ಎನ್.ಐ.ಸಿ.ಯ ಮಂಜುನಾಥ್ , ಅರವಿಂದ್  ಉಪಸ್ಥಿತರಿದ್ದರು.ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು


Spread the love