ಈರುಳ್ಳಿ ದರ ನಿಯಂತ್ರಣಕ್ಕೆ ಒತ್ತಾಯಿಸಿ ನೇಣು ಹಗ್ಗಕ್ಕೆ ಈರುಳ್ಳಿ ಕಟ್ಟಿ ಪ್ರತಿಭಟನೆ
ಮಂಗಳೂರು: ದುಬಾರಿ ಆಗುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಒತ್ತಾಯಿಸಿ ಹಳೆ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ನೇಣು ಹಗ್ಗಕ್ಕೆ ಈರುಳ್ಳಿ ಕಟ್ಟಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಝ್ ಮಾತನಾಡುತ್ತ ದೇಶದಲ್ಲಿ ಮಾರುಕಟ್ಟೆ ಭಯೋತ್ಪಾದನೆ ಹೆಚ್ಚಾಗಿದೆ. ದಲ್ಲಾಳಿಗಳ ಲಾಭ ಕೋರತನದ ಕ್ರೌರ್ಯಕ್ಕೆ ದೇಶದ ಜನ ತತ್ತರಿಸಿ ಹೋಗುತ್ತಿದ್ದಾರೆ. ಪ್ರತಿ ಕೆಜಿಗೆ ₹200 ದಾಟುತ್ತಿದ್ದರೂ ದೇಶವನ್ನು ಆಳುವ ಸರಕಾರಕ್ಕೆ ಆಮದು ಮತ್ತು ರಫ್ತು ವಹಿವಾಟಿನ ಮೇಲೆ ನಿಯಂತ್ರಣ ಮಾಡಲು ವಿಫಲವಾಗಿದೆ ಇದರ ಪರಿಣಾಮ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ.
ಮಂಗಳೂರು ಮಾರುಕಟ್ಟೆಯಲ್ಲಿ ಗಂಟೆಗೊಂದು ಬೆಲೆಗೆ ಈರುಳ್ಳಿ ಮಾರಾಟ ಆಗುತ್ತಿದೆ. ಟರ್ಕಿ ಮತ್ತು ಈಜಿಪ್ಟ್ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಈರುಳ್ಳಿಯನ್ನು ದಲ್ಲಾಳಿಗಳು ಬೇಕಾಬಿಟ್ಟಿ ದರ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಆರೋಪಿಸಿದರು
ಈರುಳ್ಳಿ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಕಳೆದ ಒಂದು ತಿಂಗಳಿನಿಂದ ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಪ್ರತಿನಿತ್ಯ 300ಟನ್ ಈರುಳ್ಳಿ ವಹಿವಾಟು ನಡೆಯುತ್ತಿದ್ದ ಮಂಗಳೂರು ಮಾರುಕಟ್ಟೆಯಲ್ಲಿ 10ಟನ್ ಈರುಳ್ಳಿ ಕೂಡ ವ್ಯಾಪಾರ ಆಗುತ್ತಿಲ್ಲ. ಇದು ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಆತಂಕ ವ್ಯಕ್ತಪಡಿಸಿದರು
ಈರುಳ್ಳಿ ಬೆಲೆ ನಿಯಂತ್ರಿಸಬೇಕಾದ ಸರಕಾರಿ ಸಂಸ್ಥೆಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ. ಸರಕಾರ ಬೆಲೆ ನಿಯಂತ್ರಿಸಲು ಯಾವುದೇ ಪ್ರಾಮಾಣಿಕ ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರದ ಹಣಕಾಸು ಸಚಿವರು ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತಿದ್ದಾರೆ. ಅಚ್ಛೇದಿನ್ ತರುತ್ತೇವೆ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರ ಈ ಕಾಲದಲ್ಲಿ ಇತಿಹಾಸದಲ್ಲಿ ಎಂದೂ ಕಾಣದ ಸಂಕಷ್ಟದ ದಿನಗಳನ್ನು ತಂದೊಡ್ಡಿದೆ ಎಂದದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷರಾದ ವಿಲ್ಲಿ ವಿಲ್ಸನ್, ಡಿವೈಎಫ್ಐ ನಗರ ಅಧ್ಯಕ್ಷ ನವೀನ್ ಬೊಲ್ಪುಗುಡ್ಡೆ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಹಸನ್ ಮೋನು ಸ್ವಾಗತಿಸಿದರೆ, ಕೋಶಾಧಿಕಾರಿ ಹರೀಶ್ ಕೆರೆಬೈಲ್ ವಂದಿಸಿದರು. ಸಂಘದ ಮುಖಂಡರಾದ ಯಲ್ಲಪ್ಪ, ಫಾರೂಕ್ ಉಳ್ಳಾಲ, ಮಜೀದ್ ಉಳ್ಳಾಲ, ಮಾದವ ಕಾವೂರ್, ಅಸ್ಲಾಂ ಬೆಂಗ್ರೆ, ಹಂಝ ಜಪ್ಪಿನಮೊಗರು, ಮೊಯಿದೀನ್ ಕಲ್ಕಟ್ಟ,
ಡಿವೈಎಫ್ಐ ಮುಖಂಡ ಹನೀಫ್ ಬೆಂಗ್ರೆ, ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು