Home Mangalorean News Kannada News ಈಶ್ವರಪ್ಪನವರ ನೋವನ್ನು ಪಕ್ಷದ ಪ್ರಮುಖರು ಮಾತನಾಡಿ ಬಗೆಹರಿಸುತ್ತಾರೆ – ವಿಜಯ್ ಕೊಡವೂರು

ಈಶ್ವರಪ್ಪನವರ ನೋವನ್ನು ಪಕ್ಷದ ಪ್ರಮುಖರು ಮಾತನಾಡಿ ಬಗೆಹರಿಸುತ್ತಾರೆ – ವಿಜಯ್ ಕೊಡವೂರು

Spread the love

ಈಶ್ವರಪ್ಪನವರ ನೋವನ್ನು ಪಕ್ಷದ ಪ್ರಮುಖರು ಮಾತನಾಡಿ ಬಗೆಹರಿಸುತ್ತಾರೆ – ವಿಜಯ್ ಕೊಡವೂರು

ಕುಂದಾಪುರ: ಕೆ.ಎಸ್ ಈಶ್ವರಪ್ಪನವರು ಪಕ್ಷ ಏನೂ ಇಲ್ಲದ ಸಂದರ್ಭದಲ್ಲಿ ಪಕ್ಷಕ್ಕೆ ಶಕ್ತಿ ತುಂಬಿದವರು. ಅವರಿಗೆ ನೋವಾಗಿರುವುದು ಸತ್ಯ. ತಮಗಾದ ನೋವನ್ನು ತೋಡಿಕೊಂಡಿದ್ದಾರೆ. ಈ ಗೊಂದಲವನ್ನು ಪಕ್ಷದ ಪ್ರಮುಖರು ಆದಷ್ಟು ಬೇಗ ಮಾತನಾಡಿ ಬಗೆಹರಿಸುತ್ತಾರೆ ಎಂದು ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ವಿಜಯ್ ಕೊಡವೂರು ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಮಧ್ಯಾಹ್ನ ಬೈಂದೂರಿನ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಿಂದೂತ್ವದ ಆಧಾರದಲ್ಲಿ ಮಾತ್ರ ಚುನಾವಣೆ ನಡೆಯೋದಿಲ್ಲ. ಅಭಿವೃದ್ದಿಯ ಆಧಾರದಲ್ಲೂ ಚುನಾವಣೆ ನಡೆಯುತ್ತದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಯೋಜನಾಬದ್ದವಾಗಿ ಕೆಲಸ ಆಗಿದೆ. ಈ ಬಾರಿಯ ಚುನಾವಣೆಯ ಯಶಸ್ಸಿಗೆ ನಾನಾ ಯೋಜನೆಗಳನ್ನು ರೂಪಿಸಿಕೊಂಡಿದ್ದೇವೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿಂದುಳಿದ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ನೆರವೇರಿದ್ದು, ಚಿಕ್ಕ-ಚಿಕ್ಕ ಸಮುದಾಯಗಳ ಸಮಾವೇಶ ಮಾಡಿ ಪಕ್ಷ, ಸಂಘಟನೆಗೆ ಒತ್ತು ಕೊಡಲಿದ್ದೇವೆ ಎಂದರು.

ಈಶ್ವರಪ್ಪ ಸಮಾವೇಶಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರ ಬೆಂಬಲದ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಈಶ್ವರಪ್ಪನವರಿಗೆ ನೋವಾಗಿದೆ ಎನ್ನುವ ಆತ್ಮೀಯತೆಯಿಂದ ಕಾರ್ಯಕರ್ತರು ಹೋಗಿರಬಹುದು. ಹೋದ ಕಾರ್ಯಕರ್ತರಿಗೆ ಮುಖಂಡರು ಮನವರಿಕೆ ಮಾಡುತ್ತಾರೆ ಎಂದರು.

ಬಿಜೆಪಿಯಲ್ಲಿನ ಕುಟುಂಬ ರಾಜಕಾರಣದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಕುಟುಂಬ ರಾಜಕಾರಣ ಆಗಬಾರದು. ಕರ್ನಾಟಕದಲ್ಲಿ ಹೆಚ್ಚೆಚ್ಚು ಆಗುತ್ತಿದೆ. ರಾಜಕಾರಣಿಗಳು ತಮ್ಮ ಮಕ್ಕಳಿಗೆ ಟಿಕೆಟ್ ಕೇಳುವುದರಲ್ಲಿ ತಪ್ಪೇನು ಇಲ್ಲ. ಒಂದೇ ಸಲ ಕುಟುಂಬ ರಾಜಕಾರಣ ಕೊನೆಗಾಣಿಸಲು ಸಾಧ್ಯವಿಲ್ಲ. ಚುನಾವಣಾ ಫಲಿತಾಂಶದಲ್ಲಿ ವ್ಯತ್ಯಾಸ ಆಗುತ್ತದೆ. ಹಂತ-ಹಂತವಾಗಿ ಇದನ್ನು ಕೊನೆಗಾಣಿಸಬೇಕು ಎಂದರು.

ಕೋಟ ಶ್ರೀನಿವಾಸ ಪೂಜಾರಿಯವರ ಸಿಂಪ್ಲಿಸಿಟಿ ನಾಟಕವಲ್ಲ. ಅವರ ಹುಟ್ಟೇ ಹಾಗೆ ಇದೆ. ಬಡತನ, ಸರಳತೆಯಿಂದಲೇ ಅವರು ಬೆಳೆದವರು. ಅವರು ಮೊದಲು ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಸರಳತೆ ಅವರ ಜೀವನ ಪದ್ದತಿ ಅಷ್ಟೇ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವೀಂದ್ರ ತಿಂಗಳಾಯ, ಹಿಂದುಳಿದ ವರ್ಗಗಳ ಮೋರ್ಚಾ ಬೈಂದೂರು ಮಂಡಲ ಅಧ್ಯಕ್ಷ ಶಿವರಾಜ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ಶಾಂತಿ ಖಾರ್ವಿ , ಮಂಜುನಾಥ ದೇವಾಡಿಗ, ರಾಘವೇಂದ್ರ ಕೊಠಾರಿ, ವಿನೋದ್ ಗುಜ್ಜಾಡಿ, ರಾಜಶೇಖರ್ ಮತ್ತಿತರರು ಇದ್ದರು.


Spread the love

Exit mobile version