Home Mangalorean News Kannada News ಈಸ್ಟರ್ ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತ – ಜೆರಾಲ್ಡ್...

ಈಸ್ಟರ್ ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತ – ಜೆರಾಲ್ಡ್ ಲೋಬೊ

Spread the love

ಈಸ್ಟರ್ ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತ – ಜೆರಾಲ್ಡ್ ಲೋಬೊ

ನಲ್ವತ್ತು ದಿನಗಳ ತಪಸ್ಸು ಕಾಲದ ವೃತದ ಬಳಿಕ ಪವಿತ್ರ ವಾರದ ಕೊನೆಯಲ್ಲಿ ಯೇಸುಕ್ರಿಸ್ತರ ಪಾಡು ಹಾಗೂ ಮರಣಗಳ ಸ್ಮರಣೆಯ ನಂತರ ಆಚರಿಸಲಾಗುವ ಮಹೋತ್ಸವವೇ ಈಸ್ಟರ್ ಅಥವಾ ಪುನರುತ್ಥಾನದ ಹಬ್ಬ. ಯೇಸುಸ್ವಾಮಿಯ ಪುನರುತ್ಥಾನವು ಈ ವಿಶ್ವದ ಚರಿತ್ರೆಯಲ್ಲೇ ನಡೆದ ಅತ್ಯದ್ಭುತ ಘಟನೆ. ಯೇಸುಕ್ರಿಸ್ತರು ಸತ್ತವರೊಳಗಿಂದ ಪುನರುತ್ಥಾನರಾಗಿ ಎದ್ದುಬಂದು ಲೋಕರಕ್ಷಕರೂ, ನಮ್ಮೆಲ್ಲರ ಭರವಸೆಯೂ ಆದರು. ಅವರ ಪುನರುತ್ಥಾನದ ಮೂಲಕ, ಪ್ರತಿ ಮಾನವನಿಗೂ ಅನಂತ ಜೀವದ ನಿರೀಕ್ಷೆ ದೊರಕಿದೆ.

ಯೇಸುವಿನ ಸಾವಿನಿಂದ ಭಯಪಟ್ಟು, ಅಧಿಕಾರಸ್ಥರ ದರ್ಪದಡಿ ಎಲ್ಲಾ ಭರವಸೆಯನ್ನು ಕಳೆದುಕೊಂಡ ಶಿಷ್ಯರು ಹಾಗೂ ಹಿಂಬಾಲಕರಲ್ಲಿ ಸ್ವಾಮಿಯ ಈ ಪುನರುತ್ಥಾನ ಹೊಸ ಚೈತನ್ಯ, ಅಭಯವನ್ನು ನೀಡಿತು. ಅಲ್ಲದೆ ಕ್ರಿಸ್ತನ ಪ್ರೀತಿ ಶಾಂತಿಯ ಸಂದೇಶವನ್ನು ಎಲ್ಲೆಡೆ ಸಾರುವ ಸ್ಪೂರ್ತಿ ತುಂಬಿತ್ತು ಎನ್ನುವ ಸಂದೇಶ ಈ ಹಬ್ಬದ ಮೂಲಕ ಹೊರ ಜಗತ್ತಿಗೆ ರವಾನೆಯಾಗುತ್ತದೆ. ದಾಸ್ಯತ್ವದಿಂದ ಬಳಲುತ್ತಿದ್ದ ತನ್ನ ಜನರನ್ನು ದೇವರು ಬಿಡಿಸಿ ಅವರನ್ನು ಹೊಸ ನಾಡಿಗೆ ಹೊಸ ಬದುಕಿನೆಡೆಗೆ ಕರೆದೊಯ್ದ ನೆನಪಿನ ಅಚರಣೆಯೂ ಈ ಹಬ್ಬವಾಗಿದೆ. ಹೀಗಾಗಿ ಈಸ್ಟರ್ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ, ಹೊಸ ಜೀವನ, ಹೊಸ ಸೃಷ್ಟಿ, ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತವೂ ಹೌದು ಎಂದು ವ್ಯಾಖ್ಯಾನಿಸುತ್ತದೆ.

ಶಿಲುಬೆಯ ಮೇಲೆ ಮೃತಪಟ್ಟ ಯೇಸುಸ್ವಾಮಿ ಮೂರನೇ ದಿನ ಪುನರುತ್ಥಾನರಾದರು. ಮರಣವು ಅವರನ್ನು ಸೋಲಿಸಲು ಅಶಕ್ತವಾಯಿತು. ಅವರು ಮರಣದ ಮೇಲೆ ದಿಗ್ವಿಜಯವನ್ನು ಸಾಧಿಸಿದರು. ನಮ್ಮ ಜೀವನದ ಕಷ್ಟ, ಸಾವು, ನೋವುಗಳು ಅರ್ಥರಹಿತವಲ್ಲ, ಬದಲಾಗಿ ದೇವರು ತಮ್ಮ ಯೋಜನೆಗಳನ್ನು ನಮ್ಮಲ್ಲಿ ಕಾರ್ಯಗತಗೊಳಿಸುವ ಗಾಢ ಅರ್ಥವನ್ನು ಒಳಗೊಂಡಿವೆ. ಕಷ್ಟಗಳಿಂದ ಕ್ಷಣಕಾಲ ನಾವು ವಿಚಲಿತರಾದರೂ, ದೇವರಲ್ಲಿ ಅಚಲ ವಿಶ್ವಾಸವಿಟ್ಟು ಅವರ ಚಿತ್ತಕ್ಕೆ ಮಣಿದರೆ, ನಮ್ಮ ಜೀವನದಲ್ಲೂ ಕಷ್ಟಗಳ ಕತ್ತಲೆ ಕಳೆದು, ಬೆಳಕು ಮೂಡುವುದು ನಿಶ್ಚಿತ.

ಪ್ರೀತಿ ದ್ವೇಷಕ್ಕಿಂತ ಹೆಚ್ಚು ಶಕ್ತಿಯುತವಾಗಿರುತ್ತದೆ. ಮಾನವ ಜನಾಂಗದ ಮೇಲೆ ದಯೆ ತೋರುವ ಈಸ್ಟರ್ ಹಬ್ಬವನ್ನು ಜಾತಿ, ಧರ್ಮ ಬೇಧವಿಲ್ಲದೆ ಆಚರಿಸೋಣ. ಈ ಪುನರುತ್ಥಾನ ಹಬ್ಬ ನಮ್ಮೆಲ್ಲರನ್ನು ಕತ್ತಲೆಯಿಂದ ಬೆಳಕಿಗೆ, ಅಸತ್ಯದಿಂದ ಸತ್ಯದೆಡೆಗೆ ದಾಟಿಸಿ ನಮ್ಮನ್ನು ಮರಣಭಯದಿಂದ ಮುಕ್ತಗೊಳಿಸಿ ಚಿರಂಜೀವಿಯಾಗಿಸಲಿ. ಎಲ್ಲಾ ಸೋದರ-ಸೋದರಿಯರಿಗೂ ನಾನು ಪಾಸ್ಖ ಹಬ್ಬದ ಶುಭಾಷಯಗಳನ್ನು ಕೋರುತ್ತೇನೆ. ಮೃತ್ಯುಂಜಯ ಯೇಸುಸ್ವಾಮಿ ನಿಮ್ಮೆಲ್ಲರನ್ನು ಸದಾ ಆಶೀರ್ವದಿಸಿ ಕಾಪಾಡಲಿ.

ಪರಮಪೂಜ್ಯ ಜೆರಾಲ್ಡ್ ಲೋಬೊ
ಉಡುಪಿಯ ಧರ್ಮಾಧ್ಯಕ್ಷರು


Spread the love

Exit mobile version