ಉಚಿತ ಸಾಮೂಹಿಕ ವಿವಾಹ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಸಪ್ತಪಧಿ ರಥಕ್ಕೆ ಚಾಲನೆ

Spread the love

ಉಚಿತ ಸಾಮೂಹಿಕ ವಿವಾಹ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಸಪ್ತಪಧಿ ರಥಕ್ಕೆ ಚಾಲನೆ

ಉಡುಪಿ : ಸರಕಾರದ ಯೋಜನೆಯಾದ ಸಪ್ತಪದಿ ಉಚಿತ ಸಾಮೂಹಿಕ ವಿವಾಹದ ಕುರಿತು ವ್ಯಾಪಕ ಅರಿವು ಮೂಡಿಸಲು ಜಿಲ್ಲೆಯಾದ್ಯಂತ ಸಂಚರಿಸುವ ಸಪ್ತಪಧಿ ರಥಕ್ಕೆ ಮುಜರಾಯಿ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡ ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ಮುಂಭಾಗದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವರು, ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 3400 ಕ್ಕೂ ಅಧಿಕ ದೇವಾಲಯಗಳಿದ್ದು , ಉತ್ತಮ ಆದಾಯ ಇರುವ 195 ರಿಂದ 200 ದೇವಾಲಯಗಳಿದ್ದು, ಎಪ್ರಿಲ್ 26 ರಂದು ರಾಜ್ಯದ 100 ಎ ದರ್ಜೆಯ ದೇವಾಲಯಗಳಲ್ಲಿ ಹಿಂದೂ ಸಂಪ್ರದಾಯದಂತೆ ಸಾಮೂಹಕ ವಿವಾಹ ನಡೆಸಲಾಗುತ್ತಿದ್ದು, ಉಚಿತ ಸಾಮೂಹಿಕ ವಿವಾಹಕ್ಕೆ ಎಷ್ಟೇ ವಧು-ವರರು ಬಂದರೂ ಯಾವುದೇ ಅಡೆ-ತಡೆಗಳಿಲ್ಲದಂತೆ ವ್ಯವಸ್ಥಿತ ರೀತಿಯಲ್ಲಿ ವಿವಾಹ ಕಾರ್ಯ ನೆರವೇರಿಸಲು ಸಿದ್ದವಿದ್ದು, ದೇವಸ್ಥಾನದ ಹಣ ಸೂಕ್ತ ರೀತಿಯಲ್ಲಿ ಬಡಜನರಿಗೆ ನೆರವಾಗಲಿದೆ ಎಂದು ಹೇಳಿದರು.

ಸಪ್ತಪದಿ ಉಚಿತ ಸಾಮೂಹಿಕ ವಿವಾಹ ರಥವು ಪ್ರತೀ ಗ್ರಾಮ, ಹಳ್ಳಿಗಳ ಜನ ನಿಬಿಡ ಪ್ರದೇಶಗಳಿಗೆ ತೆರಳಿ ಸಪ್ತಪದಿ ಸಾಮೂಹಿಕ ವಿವಾಹದ ಕುರಿತು ಕರಪತ್ರ ಮತ್ತು ಅಗತ್ಯ ಮಾಹಿತಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.

ಸಾಮೂಹಿಕ ವಿವಾಹಕ್ಕಾಗಿ ಈಗಾಗಲೇ ಕೊಲ್ಲೂರುನಲ್ಲಿ 16 ಅರ್ಜಿಯನ್ನು ಸಾರ್ವಜನಿಕರು ಪಡೆದಿದ್ದು, ಈ ದೇವಲಯದಲ್ಲಿ 100 ಕ್ಕೂ ಅಧಿಕ ಅರ್ಜಿ ಬರುವ ನಿರೀಕ್ಷೆ ಇದೆ. ರಾಜ್ಯದ್ಯಂತ ಸುಮಾರು 1000 ಕ್ಕೂ ಅಧಿಕ ಜೋಡಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಲಿದ್ದು, ವಿವಾಹದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ವಧು ವರರು ಮುಂಚಿತವಾಗಿಯೇ ದೇವಸ್ಥಾನದಲ್ಲಿ ಅರ್ಜಿಯನ್ನು ಪಡೆದು ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ಸಂಬಂದಪಟ್ಟ ದೇವಸ್ಥಾನದ ಕಚೇರಿಗೆ ಮಾರ್ಚ್ 27 ರ ಒಳಗೆ ನೊಂದಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

ಸಾಮೂಹಿಕ ವಿವಾಹವನ್ನು ವ್ಯವಸ್ಥಿತವಾಗಿ, ಬಹಳ ಜಾಗೃತರಾಗಿ ಮನೆಯ ಮದುವೆಯಂತೆಯೇ ಮುತುವರ್ಜಿಯಿಂದ ನಡೆಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಸಚಿವ ಕೋಟ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೊಲ್ಲೂರು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ದೇವಾಲಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಸುತ್ತಗುಂಡಿ , ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ , ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಪಂಚಾಯತ್ ಸದಸ್ಯ ಬಾಬು ಹೆಗಡೆ , ಬಟವಾಡೆ ಸುರೇಶ್, ಹಾಗೂ ದೇವಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರು, ವಂಡಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಹರಿ, ರಮೇಶ್ ಗಾಣಿಗ, ಜಯಂತಿ ವಿಜಯಕೃಷ್ಣ, ಅಂಬಿಕಾ ದೇವಾಡಿಗ, ಶ್ರೀಧರ ಅಡಿಗ, ಗ್ರೀಷ್ಮಾಬಿಡೆ, ಮತ್ತಿತರರು ಉಪಸ್ಥಿತರಿದ್ದರು.


Spread the love