ಉಚ್ಚಿಲ: ಸೆಕ್ರೇಡ್ ಹಾರ್ಟ್ ಚರ್ಚ್ ಉಚ್ಚಿಲ ಎರ್ಮಾಳು ಇದರ ನೂತನ ಕಟ್ಟಡದ ಉದ್ಘಾಟನೆ ಮತ್ತು ಆಶೀರ್ವಚನ ಸಮಾರಂಭ ಗುರುವಾರ ಮೇ 14 ರಂದು ನಡೆಯಲಿದೆ.
ಮೂಲತಃ ಶಿರ್ವ ಚರ್ಚಿನ ಆಡಳಿತಕ್ಕೆ ಒಳಪಟ್ಟಿದ್ದ ಎರ್ಮಾಳು ಚರ್ಚು 1961 ರಲ್ಲಿ ಈ ಪರಿಸರದ ಕ್ರೈಸ್ತ ಸಮುದಾಯದ ಧಾರ್ಮಿಕ ಅಗತ್ಯತೆಗಳಿಗಾಗಿ ಚಿಕ್ಕ ಪ್ರಾರ್ಥನಾಲಯವನ್ನು ಅಂದಿನ ಶಿರ್ವ ಚರ್ಚಿನ ಧರ್ಮಗುರುಗಳಾದ ವಂ|ಹಿಲಾರಿ ಗೊನ್ಸಾಲ್ವಿಸ್ ಇವರ ನೇತೃತ್ವದಲ್ಲಿ ನಿರ್ಮಿಸಲಾಯಿತು. 1971 ರಲ್ಲಿ ಶಿರ್ವ ಚರ್ಚಿನಿಂದ ಬೇರ್ಪಟ್ಟು ಕಲತ್ತೂರಿನಲ್ಲಿ ನೂತನ ಚರ್ಚು ನಿರ್ಮಾಣವಾದ ಬಳಿಕ ಎರ್ಮಾಳ್ ಪ್ರಾರ್ಥನಾಲಯದ ಆಡಳಿತ ಕಲತ್ತೂರಿನ ಚರ್ಚ್ ಆಡಳಿತಕ್ಕೆ ಹಸ್ತಾಂತರವಾಯಿತು. ಬಳಿಕ ಪ್ರಾರ್ಥನಾಲಯ ವಿವಿಧ ರೀತಿಯಲ್ಲಿ ಅಭಿವೃದ್ಧಿಯನ್ನು ಕಂಡು 1993 ಮೇ 23 ರಂದು ಅಧಿಕೃತ ಚರ್ಚಿನ ಮಾನ್ಯತೆಯನ್ನು ಪಡೆಯಿತು. ವಂ|ಪೀಟರ್ ನಜರೆತ್ ಮೊದಲ ಧರ್ಮಗುರುವಾಗಿ ನೇಮಕಗೊಂಡರು. ಅಲ್ಲಿಂದ ಈವರೆಗೆ ವಂ|ಹೆನ್ರಿ ಕ್ಯಾಸ್ತಲಿನೊ, ವಂ| ವಿಶಾಲ್ ಲೋಬೊ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ವಂ|ಲೋರೆನ್ಸ್ ರೊಡ್ರಿಗಸ್ ಧರ್ಮಗುರುಗಳಾಗಿ, ಶಾರ್ಲೆಟ್ ಫುರ್ಟಾಡೊ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ, ವಿನಯ್ ಕ್ವಾಡ್ರಸ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚರ್ಚಿನ ಆಡಳಿತದಲ್ಲಿ 65 ಕುಟುಂಬಗಳ 250 ರಷ್ಟು ಸಂಖ್ಯೆಯ ಕ್ರೈಸ್ತ ಭಕ್ತಾದಿಗಳು ಇದ್ದು, 4 ವಾಳೆಗಳನ್ನು ಹೊಂದಿದೆ. ಕ್ರಿಯಾಶೀಲ ಧರ್ಮಗುರುಗಳು ಹಾಗೂ ಚರ್ಚ್ ಪಾಲನಾ ಮಂಡಳಿಯ ನೇತೃತ್ವದ ಹಾಗೂ ಭಕ್ತಾದಿಗಳ ಸಹಕಾರದಿಂದ ನೂತನ ದೇವಮಂದಿರ ನಿರ್ಮಾಣಗೊಂಡಿದೆ.
ಮೇ 14ರಂದು ಬೆಳಿಗ್ಗೆ 9.30ಕ್ಕೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ನೂತನ ದೇವಾಲಯವನ್ನು ಉದ್ಘಾಟಿಸಿ ಆಶೀರ್ವಚಿಸಲಿದ್ದಾರೆ. ಬಳಿಕ ನಡೆಯುವ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸುವ ಅವರೊಂದಿಗೆ ಬರೈಪುರ ಕಲ್ಕತ್ತಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ|ಸಾಲ್ವದೊರ್ ಲೋಬೊ ಹಾಗೂ ಬರೈಲಿ ಧರ್ಮಪ್ರಾಂತ್ಯದ ಹಿಂದಿನ ಧರ್ಮಾಧ್ಯಕ್ಷ ಅ|ವಂ|ಡಾ| ಎಂಟನಿ ಫೆರ್ನಾಂಡಿಸ್ ಭಾಗವಹಿಸಲಿದ್ದಾರೆ.
ಬಲಿಪೂಜೆಯ ಬಳಿಕ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಧರ್ಮಾಧ್ಯಕ್ಷರು ವಹಿಸಲಿದ್ದು,ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್, ವಲಯ ಪ್ರಧಾನ ಧರ್ಮಗುರು ವಂ|ಫೆಡ್ರಿಕ್ ಮಸ್ಕರೇನ್ಹಸ್, ಸಿಎಸ್ಐ ಬೆತೆಲ್ ಚರ್ಚ್ ಮೂಳೂರು ಇದರ ಸಭಾಪಾಲಕರಾದ ವಂ|ಬರ್ಟಿ ಅಮ್ಮನ್ನ, ಉಚ್ಚಿಲ ಮಹಾಲಕ್ಷ್ಮೀ ದೇವಳದ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಉಪಾಧ್ಯ, ಉಚ್ಚಿಲ ಸೈಯ್ಯದ್ ಅರಬಿ ಮಸೀದಿ ಖತೀಬರಾದ ಅಬ್ದುಲ್ ಹಕೀಂ ಮುಸ್ಲಿಯಾರ್, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಎರ್ಮಾಳು ಬಡಾ ಗ್ರಾಮಪಂಚಾಯತ್ ಅಧ್ಯಕ್ಷರಾದ ವಸಂತ್ ಕೆ ಶೆಟ್ಟಿ, ದಕ ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ಪ್ರಧಾನ ಕಾರ್ಯದರ್ಶಿ ಸುಧಾಕರ ಕರ್ಕೆರಾ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.