ಉಡುಪಿಯಲ್ಲಿ ಐವನ್ ಡಿಸೋಜಾ ರಿಂದ ಸರಕಾರಿ ಯೋಜನೆಗಳ ಕ್ರೈಸ್ತ ಮಾಹಿತಿ ಕೇಂದ್ರದ ಉದ್ಘಾಟನೆ
ಉಡುಪಿ: ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದವರಿಗೆ ಸರಕಾರ ಹಲವಾರು ಯೋಜನೆಗಳನ್ನು ನೀಡಿದ್ದು ಮಾಹಿತಿ ಕೊರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯ ಯೋಜನೆಯ ಸೌಲಭ್ಯಗಳನ್ನು ಪಡೆಯುವಲ್ಲಿ ಹಿಂದೆ ಉಳಿದಿದೆ ಎಂದು ರಾಜ್ಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.
ಅವರು ಸೋಮವಾರ ಉಡುಪಿಯಲ್ಲಿ ಕ್ರೈಸ್ತ ಸಂಘಟನೆ ವತಿಯಿಂದ ಆರಂಭಿಸಲಾದ ಸರಕಾರಗಳ ಸೌಲಭ್ಯಗಳ ಮಾಹಿತಿ, ಕ್ರೈಸ್ತರ ಕುಂದುಕೊರತೆಗಳ ಪರಿಹಾರಕ್ಕಾಗಿ ಕ್ರೈಸ್ತ ಮಾಹಿತಿ ಕೇಂದ್ರದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೈಸ್ತ ಸಮುದಾಯದದ ಜನರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅಧಿಕಾರಿಗಳು ಕುರಿತು ಕ್ರೈಸ್ತ ಸಮುದಾಯವಿರುವ ಪ್ರತಿಯೊಂದು ಚರ್ಚ್, ಶಾಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಈ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು. ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ರೂ 50000 ವರೆಗೆ ಅನುದಾನ ಸರಕಾರ ನೀಡುತ್ತಿದ್ದು ಈಗಾಗಲೇ ಸಿಇಟಿ ಸೆಲ್ ನಲ್ಲಿ ಹಣವನ್ನು ಠೇವಣಿ ಮಾಡಲಾಗಿದ್ದು, ಸಿಇಟಿ ಬರೆದು ಸರಕಾರಿ ಕಾಲೇಜುಗಳಲ್ಲಿ ಎಂಜಿನಿ ಯರಿಂಗ್, ಮೆಡಿಕಲ್ ಓದುವ ಕ್ರೈಸ್ತ ವಿದ್ಯಾರ್ಥಿಗಳ ಶುಲ್ಕವನ್ನು ಇದರಿಂದಲೇ ಭರಿಸಲಾಗುತ್ತದೆ ಎಂದರು.
ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸಮುದಾಯ ಭವನಗಳ ನಿರ್ಮಾಣ, ಚರ್ಚುಗಳ ದುರಸ್ತಿ ಮತ್ತು ನವೀಕರಣಕ್ಕಾಗಿ ಸಹಾಯಧನ ವಿದ್ಯಾಸಿರಿ, ಬಿದಾಯಿ, ಕೌಶಲ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ವಿವಿಧ ತರಬೇತಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ ಸರ್ಕಾರವು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಮತ್ತಿತರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕ್ರಿಶ್ಚಿಯನ್ ಸಮುದಾಯಕ್ಕೆ ಸರ್ಕಾರವು ಹಲವಾರು ಯೋಜನೆಗಳನ್ನು ನೀಡಿದೆ. ಈ ಯೋಜನೆಗಳ ಸದುಪಯೋಗಕ್ಕೆ ಸಮುದಾಯದಿಂದ ಅರ್ಜಿಗಳು ಬರುತ್ತಿಲ್ಲ ಎಂಬ ದೂರು ಇದ್ದು, ಸಮುದಾಯದವರಿಗೆ ಮಾಹಿತಿಯ ಕೊರತೆ ಇರಬಹುದು. ಇದನ್ನು ಹೋಗಲಾಡಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಭೇಟಿ ನೀಡಿ ಮಾಹಿತಿಯನ್ನು ನೀಡಲಾಗಿದೆ. ಈಗಾಗಲೇ 28 ಜಿಲ್ಲೆಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ ಎಂದರು.
ಕ್ರಿಶ್ಚಿಯನ್ ಸಮುದಾಯಕ್ಕೆ ಸ್ವ ಉದ್ಯೋಗ ಕೈಗೊಳ್ಳಲು 5 ಲಕ್ಷ ರೂಗಳನ್ನು ನೀಡಲಾಗುವುದು. ಇದರಲ್ಲಿ 2 ಲಕ್ಷ ಸಬ್ಸಿಡಿ ನೀಡಲಾಗುವುದು. ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುವವರಿಗೆ 20 ಲಕ್ಷ ರೂಗಳವರೆಗೆ ಸಹಾಯ ಧನ, ಚರ್ಚ್ ರಿಪೇರಿಗೆ 50 ಲಕ್ಷ ರೂ, ಸಮುದಾಯ ಭವನ ನಿರ್ಮಾಣಕ್ಕೆ 2 ಕೋಟಿ ರೂ ಅನುದಾನ ಮುಂತಾದ ಸೌಲಭ್ಯಗಳು ಇದ್ದು ಸಮುದಾಯದವರು ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಸಮುದಾಯಕ್ಕೆ ಹಲವಾರು ಯೋಜನೆಗಳನ್ನು ನೀಡಿದೆ. ಮಾಹಿತಿಯ ಕೊರತೆಯಿಂದಾಗಿ ಎಲ್ಲರಿಗೂ ಸೌಲಭ್ಯಗಳು ತಲುಪಿಲ್ಲ. ಆ ಮಾಹಿತಿಯನ್ನು ಈ ಮಾಹಿತಿ ಕೇಂದ್ರದ ಮೂಲಕ ಸಮುದಾಯವರು ಪಡೆಯುವಂತಾಗಲಿ. ಇದಾದರೆ ಮಾತ್ರ ಸಮುದಾಯ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಎಂದರು.
ಕಚೇರಿಯನ್ನು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಇದರ ನಿವೃತ್ತ ಪ್ರಾಂಶುಪಾಲರಾದ ಡಾ|ಜೆರಾಲ್ಡ್ ಪಿಂಟೊ ಹಾಗೂ ಐವನ್ ಡಿಸೋಜಾ ರಿಬ್ಬನ್ ಕತ್ತರಿಸಿ ಉದ್ಥಾಟಿಸಿದರು.
ಕ್ರೈಸ್ತ ಸಂಘಟನೆ ನಾಯಕರಾದ ರೊನಾಲ್ಡ್ ಕರ್ಕಡ, ಚಾರ್ಲ್ಸ್ ಅಂಬ್ಲರ್, ತಾಲೂಕು ಪಂಚಾಯತ್ ಸದಸ್ಯ ಮೈಕಲ್ ರಮೇಶ್ ಡಿಸೋಜಾ, ಗ್ರಾಮ ಪಂಚಾಯತ್ ಸದಸ್ಯರಾದ ಸುನೀಲ್ ಕಾಬ್ರಾಲ್, ಮೆಲ್ವಿನ್ ಡಿಸೋಜಾ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಐಸಿವೈಎಮ್ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾದ ಡಿಯೋನ್ ಡಿಸೋಜಾ, ಯುವ ನಾಯಕ ಸ್ಟೀವನ್ ಕುಲಾಸೊ ಹಾಗೂ ಇತರರು ಉಪಸ್ಥಿತರಿದ್ದರು.
ಸುನೀಲ್ ಕಾಬ್ರಾಲ್ ಸ್ವಾಗತಿಸಿ, ಮೆಲ್ವಿನ್ ಡಿಸೋಜಾ ವಂದಿಸಿದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.