ಉಡುಪಿಯಲ್ಲಿ ಕೋವಿಡ್ ಟೆಸ್ಟ್ ಲ್ಯಾಪ್ ಸ್ಥಾಪಿಸಲು ಆಗ್ರಹ : ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಡಿಸಿಗೆ ಮನವಿ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವಂತೆ ಮತ್ತು ಮಂಗಳೂರಿನ ಪ್ರಯೋಗಾಲಯದಲ್ಲಿ ಉಡುಪಿ ಜಿಲ್ಲೆಗೆ ಸಂಬಂಧಪಟ್ಟ ಮೃತರ ಕೋವಿಡ್ ಪರೀಕ್ಷೆಯನ್ನು ಶೀಘ್ರವಾಗಿ ನಡೆಸಲು ಶಿಫಾರಸು ಮಾಡುವಂತೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಇಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿ ಸಲ್ಲಿಸಿದೆ.
ಕೋವಿಡ್-19ನಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿರುವುದು ಒಂದೆಡೆಯಾದರೆ, ಸ್ವಾಭಾವಿಕವಾಗಿ ಮೃತರಾದವರನ್ನೂ ಬಿಡದೇ ಬಾಧಿಸುತ್ತಿರುವುದು ಇನ್ನೊಂದೆಡೆಯಾಗಿದೆ. ಇಂತಹ ಪ್ರತಿಕೂಲ ಸಮಯದಲ್ಲಿ ಮೃತರ ಕೋವಿಡ್ ಪರೀಕ್ಷೆ ಮುಂತಾದ ಔಪಚಾರಿಕತೆಗಳು ಸಂಪೂರ್ಣಗೊಳ್ಳಲು ತಗಲುವ ಅವಧಿ ಮತ್ತು ಓಡಾಟ ಇವುಗಳಿಂದಾಗಿ ಮೃತರ ಸಂಬಂಧಿಗಳಿಗೆ ಅತೀವ ವೇದನೆ ಮತ್ತು ಅನಾನುಕೂಲ ವಾಗಿದೆ ಎಂದು ಒಕ್ಕೂಟ ಮನವಿಯಲ್ಲಿ ತಿಳಿಸಿದೆ.
ಉಭಯ ಜಿಲ್ಲೆಗೆ ಮಂಗಳೂರು ಮಾತ್ರ ಕೋವಿಡ್ ಪರೀಕ್ಷೆಯ ಕೇಂದ್ರವಾಗಿರುವುದರಿಂದ ಉಡುಪಿ ಜಿಲ್ಲೆಗೆ ತುಂಬಾ ಅನಾನುಕೂಲವಾಗಿದೆ. ಆದುದರಿಂದ ಉಡುಪಿ ಜಿಲ್ಲೆಗೆ ಕೋವಿಡ್ ಟೆಸ್ಟ್ ಲ್ಯಾಬ್ ತುಂಬಾ ಅಗತ್ಯವಿದೆ. ಜಿಲ್ಲೆಯಲ್ಲಿ ಟೆಸ್ಟ್ ಲ್ಯಾಬ್ ಸ್ಥಾಪನೆಯಾಗುವವರೆಗೆ ಮಂಗಳೂರಿನ ಪ್ರಯೋಗಾಲಯದಲ್ಲಿ ಉಡುಪಿ ಜಿಲ್ಲೆಯವರಿಗಾಗಿ ಕೋವಿಡ್ ಪರೀಕ್ಷಾ ಅವಧಿಯನ್ನು ಕಾಯ್ದಿರಿಸುವಂತಹ ವ್ಯವಸ್ಥೆಯನ್ನು ಮಾಡಿ ಜಿಲ್ಲೆಯಲ್ಲಿ ಮೃತರಾದವರ ಸಂಬಂಧಿಗಳ ವೇದನೆಯನ್ನು ಕಡಿಮೆಗೊಳಿಸಬೇಕು ಎಂದು ಒಕ್ಕೂಟ ಮನವಿಯಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಎಂ. ಯಾಸೀನ್ ಮಲ್ಪೆ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ವಕ್ತಾರ ಸಲಾವುದ್ದೀನ್ ಅಬ್ದುಲ್ಲಾಹ್ ಉಪಸ್ಥಿತರಿದ್ದರು.