ಉಡುಪಿಯಲ್ಲಿ ವಿಟ್ಲಪಿಂಡಿ ಉತ್ಸವ ಸಂಪನ್ನ; ಸಾವಿರಾರು ಭಕ್ತರು ಸಾಕ್ಷಿ
ಉಡುಪಿ: ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಶನಿವಾರ ಗೋಪಾಲಕರಿಂದ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ, ಹುಲಿವೇಷದ ಸ್ಪರ್ಧೆಯೊಂದಿಗೆ ವಿಟ್ಲಪಿಂಡಿ ಉತ್ಸವ ಅದ್ದೂರಿಯಾಗಿ ನಡೆಯುವ ಮೂಲಕ ಸಂಪನ್ನಗೊಂಡಿದೆ.
ಉಡುಪಿಯ ರಥ ಬೀದಿ ಶನಿವಾರ ಜನರಿಂದ ತುಂಬಿ ಹೋಗಿತ್ತು. ವಿಟ್ಲಪಿಂಡಿ ಉತ್ಸವ ವೀಕ್ಷಿಸಲು ಜನರು ಬೆಳಗ್ಗೆಯಿಂದಲೇ ಕಾದು ಕುಳಿತಿದ್ದರು. ಮಧ್ಯಾಹ್ನದ ವೇಳೆಗೆ ರಥ ಬೀದಿಯಯಲ್ಲಿ ಸಂಭ್ರಮದಿಂದ ವಿಟ್ಲಪಿಂಡಿ ಉತ್ಸವ ಆರಂಭವಾಯಿತು. ಕೃಷ್ಣ ಜನ್ಮಾಷ್ಟಮಿ ಮರುದಿನ ಶ್ರೀ ಕೃಷ್ಣನ ಬಾಲಲೀಲೆಗಳನ್ನು ನೆನಪು ಮಾಡಿಕೊಳ್ಳುವ ಉದ್ದೇಶದಿಂದ ವಿಟ್ಲಪಿಂಡಿ ಉತ್ಸವ ಆಚರಿಸಲಾಗುತ್ತದೆ.
ಶನಿವಾರ ಮುಂಜಾನೆ ಶ್ರೀಕೃಷ್ಣ- ಮುಖ್ಯಪ್ರಾಣರಿಗೆ ಪರ್ಯಾಯ ಶ್ರೀಪಾದರು ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.
ಶ್ರೀಕೃಷ್ಣ ಲೀಲೊತ್ಸವದ ವೈಭವದ ಶೋಭಾ ಯಾತ್ರೆಯಲ್ಲಿ ಪರ್ಯಾಯ ಪಲಿಮಾರು ಮಠದ ಹಿರಿಯ ಮತ್ತು ಕಿರಿಯ ಯತಿ, ಕೃಷ್ಙಾಪುರ ಮಠದ ಸ್ವಾಮೀಜಿ ಹಾಗೂ ಅದಮಾರು ಮಠದ ಕಿರಿಯ ಸ್ವಾಮೀಜಿಗಳು ಭಾಗವಹಿಸಿದ್ದರು.
ನವರತ್ನ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಪೂಜಾ ವಿಧಿ ವಿಧಾನಗಳನ್ನು ಪೂರ್ಣಗೊಳಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಚಿನ್ನದ ರಥ, ನವರತ್ನ ರಥ, ಹುಲಿ ವೇಷ ತಂಡ, ವಿವಿಧ ವೇಷ ತಂಡ, ಕಲಾತಂಡ, ವಾದ್ಯ ತಂಡ ಹಾಗೂ ಮರಗೋಲು ತಂಡಗಳು ಒಂದರ ಹಿಂದೆ ಒಂದು ಸಾಗಿ ಬಂದ ದೃಶ್ಯವನ್ನು ಜನರು ಕಣ್ತುಂಬಿಕೊಂಡರು.
ಸಾವಿರಾರು ಜನರು ಅದ್ಧೂರಿ ರಥೋತ್ಸವ ನೋಡಲು ಬಂದಿದ್ದ ಕಾರಣ ರಥಬೀದಿ ತುಂಬಿ ಹೋಗಿತ್ತು. ರಥೋತ್ಸವ ವೀಕ್ಷಿಸಲು ಜನರು ರಥಬೀದಿ ಸುತ್ತಲೂ ಇರುವ ಕಟ್ಟಡಗಳನ್ನು ಸಹ ಏರಿ ನಿಂತಿದ್ದರು.
ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಒಂದೊಂದೆ ಮಡಕೆಧಿಗಳನ್ನು ಸಾಂಪ್ರದಾಯಿಕ ಗೊಲ್ಲರ ವೇಷ ಧರಿಸಿದವರು ಒಡೆಯುತ್ತ ಮುಂದೆ ಸಾಗಿಧಿದಂತೆ ಮೆರವಣಿಗೆ ಮುಂದೆ ಸಾಗಿತು. ಕೊನೆಯಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು.
ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದ್ದ ಕಾರಣ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.