ಉಡುಪಿಯಲ್ಲಿ ಸ್ಯಾಂಡ್ ಬಜಾರ್ ಆಪ್ ಮೂಲಕ ಮರಳು- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

Spread the love

ಉಡುಪಿಯಲ್ಲಿ ಸ್ಯಾಂಡ್ ಬಜಾರ್ ಆಪ್ ಮೂಲಕ ಮರಳು- ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮರಳು ವಿತರಣೆ ಕುರಿತಂತೆ ಸ್ಯಾಂಡ್ ಬಜಾರ್ ಆಪ್ನ ಅಭಿವೃದ್ದಿ ಕಾರ್ಯ ನಡೆಯುತ್ತಿದ್ದು, ಆಪ್ ಅಭಿವೃಧ್ದಿ ಪ್ರಕ್ರಿಯೆ ಸಂಪೂರ್ಣಗೊಂಡ ನಂತರ ಆಪ್ ಮೂಲಕ ಸಾರ್ವಜನಿಕರಿಗೆ ನೇರವಾಗಿ ಮರಳು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಜಿಲ್ಲಾ ಮರಳು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಜನರಿಗೆ ಕಡಿಮೆ ದರದಲ್ಲಿ, ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ, ಮನೆ ಬಾಗಿಲಿಗೆ ಮರಳು ತಲುಪಿಸುವ ಕುರಿತಂತೆ ಜಿಲ್ಲಾಡಳಿತದ ವತಿಯಿಂದ ಸ್ಯಾಂಡ್ ಬಜಾರ್ ಆಪ್ನ ಅಭಿವೃದ್ದಿ ನಡೆಯುತ್ತಿದ್ದು, ದ.ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಆರಂಭವಾಗಿರುವ ಆಪ್ ಮಾದರಿಯಲ್ಲಿಯೇ ಉಡುಪಿ ಜಿಲ್ಲೆಗೆ ಸಂಬಂದಿಸಿದಂತೆ ಆಪ್ನ ಅಭಿವೃದ್ದಿ ನಡೆಯುತ್ತಿದ್ದು, ಈ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಆಪ್ನಲ್ಲಿ ಅಳವಡಿಸಬಹುದಾದ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಇದನ್ನು ಆಪ್ ಅಭಿವೃದ್ದಿಪಡಿಸುವ ಸಂಸ್ಥೆಗೆ ನೀಡಲಾಗಿದ್ದು, ಸಂಪೂರ್ಣವಾಗಿ ಆಪ್ ಅಭಿವೃದ್ದಿಗೊಂಡ ನಂತರ ಸಾರ್ವಜನಿಕರಿಗೆ ಮರಳು ವಿತರಣೆ ಕುರಿತಂತೆ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಇದರ ಮೂಲಕವೇ ಮರಳು ವಿತರಿಸಲಾಗುವುದು ಎಂದ ಜಿಲ್ಲಾಧಿಕಾರಿ, ಶೀಘ್ರದಲ್ಲಿ ಆಪ್ ಸಿದ್ಧಪಡಿಸುವಂತೆ ಸಂಬಂದಪಟ್ಟ ಸಂಸ್ಥೆಗೆ ಸೂಚಿಸಿದರು.

ಸ್ಯಾಂಡ್ ಬಜಾರ್ ಆಪ್ ಬಳಸುವ ಮೂಲಕ ಸಾರ್ವಜನಿಕರು, ತಮಗೆ ಸಮೀಪದ ಸ್ಥಳದಿಂದಲೇ ಮರಳು ಪಡೆಯಬಹುದಾಗಿದ್ದು, ಆನ್ಲೈನ್ನಲ್ಲಿ ಮರಳಿಗೆ ಸಂಬಂದಪಟ್ಟ ದರ ವೀಕ್ಷಿಸಿ, ಆನ್ಲೈನ್ ಪಾವತಿ ಮಾಡಿದಲ್ಲಿ, ಮನೆ ಬಾಗಿಲಿಗೆ ಮರಳು ತಲುಪಲಿದ್ದು, ಪ್ರತ್ಯೇಕ ವಾಹನ ಬಾಡಿಗೆ ಪಾವತಿಸುವ ಅಗತ್ಯವಿಲ್ಲ ಅಲ್ಲದೇ ತಾವು ಮರಳು ಬುಕ್ ಮಾಡಿದ ನಂತರ ಮರಳು ಲೋಡ್ ಆದ ಬಗ್ಗೆ, ಯಾವ ವಾಹನದಲ್ಲಿ ಬರುತ್ತಿದೆ ಎನುವ ಬಗ್ಗೆ ಪ್ರತಿಯೊಂದು ಮಾಹಿತಿಯು ನಿಮ್ಮ ಮೊಬೈಲಿಗೆ ಬರಲಿದೆ, ಅತ್ಯಂತ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಯಲಿದೆ. ಮರಳು ಗುತ್ತಿಗೆದಾರರ ಮತ್ತು ಮರಳು ಸಾಗಾಟ ಮಾಡುವ ವಾಹನಗಳ ನೊಂದಣಿ ಸಹ ಆಪ್ನಲ್ಲಿ ನಡೆಯಲಿದೆ ಎಂದು ಡಿಸಿ ಹೇಳಿದರು.

ಆಪ್ ಬಳಕೆಗೆ ಸಿದ್ದಗೊಂಡ ನಂತರ ಮರಳು ಗುತ್ತಿಗೆದಾರರು ಮತ್ತು ಮರಳು ಸಾಗಾಟ ಮಾಡುವ ವಾಹನಗಳ ಚಾಲಕರಿಗೆ ಆಪ್ ಬಳಕೆ ಕುರಿತಂತೆ ಸಂಪೂರ್ಣ ಮಾಹಿತಿ ಕುರಿತ ತರಬೇತಿ ಕಾರ್ಯಾಗಾರ ಏರ್ಪಡಿಸುವುದಾಗಿ ಮತ್ತು ಸಾರ್ವಜನಿಕರಿಗೆ ಸಹ ಆಪ್ ಬಳಕೆ ಕುರಿತು ಮಾಹಿತಿ ನೀಡುವುದಾಗಿ ಹೆಪ್ಸಿಬಾ ರಾಣಿ ತಿಳಿಸಿದರು.
ಆಪ್ ನಲ್ಲಿ ಅಳವಡಿಸಬಹುದಾದ ಅಂಶಗಳ ಕುರಿತು ಸಭೆಯಲ್ಲಿ ವಿಸ್ತøತ ಚರ್ಚೆ ನಡೆಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರನ್, ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರಾಂಜಿ ನಾಯ್ಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
(ಸ್ಯಾಂಡ್ ಬಜಾರ್ ಆಪ್ ಮಾಹಿತಿಗಾಗಿ : 9663303409 ನವೀನ್)


Spread the love