Home Mangalorean News Kannada News ಉಡುಪಿಯ ಮಹಿಳಾ-ಮಕ್ಕಳ ಆಸ್ಪತ್ರೆ ನಡೆಸಲು ಅಸಾಧ್ಯ ಎಂದು ಕೈಚೆಲ್ಲಿದ ಬಿ.ಆರ್.ಎಸ್ ಹೆಲ್ತ್ ಕೇರ್ ಕಂಪೆನಿ!

ಉಡುಪಿಯ ಮಹಿಳಾ-ಮಕ್ಕಳ ಆಸ್ಪತ್ರೆ ನಡೆಸಲು ಅಸಾಧ್ಯ ಎಂದು ಕೈಚೆಲ್ಲಿದ ಬಿ.ಆರ್.ಎಸ್ ಹೆಲ್ತ್ ಕೇರ್ ಕಂಪೆನಿ!

Spread the love

ಉಡುಪಿಯ ಮಹಿಳಾ-ಮಕ್ಕಳ ಆಸ್ಪತ್ರೆ ನಡೆಸಲು ಅಸಾಧ್ಯ ಎಂದು ಕೈಚೆಲ್ಲಿದ ಬಿ.ಆರ್.ಎಸ್ ಹೆಲ್ತ್ ಕೇರ್ ಕಂಪೆನಿ!

ಉಡುಪಿ: ಉಡುಪಿ ಮೂಲದ ಉದ್ಯಮಿ ಬಿ.ಆರ್.ಶೆಟ್ಟಿ ಗಲ್ಫ್ ರಾಷ್ಟ್ರಗಳಲ್ಲಿ ಸ್ಥಾಪಿಸಿದ್ದ ಆರ್ಥಿಕ ಸಾಮ್ರಾಜ್ಯ ಕುಸಿಯುತ್ತಿದೆ. ಈ ಕುಸಿತದ ಪರಿಣಾಮ ಬಿಆರ್ ಶೆಟ್ಟರ ತವರು ಜಿಲ್ಲೆ ಉಡುಪಿಯಲ್ಲೂ ಕಾಣಿಸುತ್ತಿದೆ. ತನ್ನ ಹೆತ್ತವರ ನೆನಪಿನಲ್ಲಿ ಸರ್ಕಾರದ ಜಾಗವನ್ನು ಪಡೆದು ಬಿಆರ್ ಶೆಟ್ಟಿ ಯವರು ಹೆರಿಗೆ ಆಸ್ಪತ್ರೆಯೊಂದನ್ನು ಪ್ರಾರಂಭಿಸಿದರು. ಸದ್ಯ ಈ ಉಚಿತ ಆಸ್ಪತ್ರೆಯ ನಿರ್ವಹಣೆ ಮಾಡಲಾಗದೆ, ಶೆಟ್ಟರ ಬಿ.ಆರ್.ಎಸ್ ಹೆಲ್ತ್ ಕೇರ್ ಕಂಪೆನಿ ಆಸ್ಪತ್ರೆ ಯನ್ನು ರಾಜ್ಯ ಸರಕಾರಕ್ಕೆ ವಾಪಸು ಮಾಡಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಮುತುವರ್ಜಿಯಲ್ಲಿ ಉಡುಪಿಯ ಸರಕಾರಿ ಹೆರಿಗೆ ಆಸ್ಪತ್ರೆ ಯನ್ನು ಬಿಆರ್ ಶೆಟ್ಟಿಯವರಿಗೆ ವಹಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಶೆಟ್ಟಿಯವರಿಗೆ ಒಂದು ಮಲ್ಟಿ ಸ್ಪೆಷಲ್ ಆಸ್ಪತ್ರೆಯನ್ನು ನಡೆಸಲು ಸರಕಾರಿ ಭೂಮಿಯನ್ನು ಬಿಟ್ಟು ಕೊಡಲಾಗಿತ್ತು. ತನ್ನ ತಂದೆ ತಾಯಿಗಳಾದ ಕೂಸಮ್ಮ ಶಂಭು ಶೆಟ್ಟಿ ಹೆಸರಲ್ಲಿ ಆಸ್ಪತ್ರೆಯನ್ನು ಆರಂಭಿಸಿದ್ದರು. ಸುಸಜ್ಜಿತ ರೀತಿಯಲ್ಲಿ ಸೆಂಟ್ರಲ್ ಎಸಿ ಅಳವಡಿಸಿ ಸಂಪೂರ್ಣ ಉಚಿತ ಚಿಕಿತ್ಸೆಗೆ ವ್ಯವಸ್ಥೆಯನ್ನೂ ಮಾಡಿದ್ದರು.

ಆದರೆ ಸದ್ಯ ಬಿಆರ್ ಶೆಟ್ಟಿ ಅವರ ಎಂ ಎನ್ ಸಿ ಕಂಪನಿ ದಿವಾಳಿ ಹಂತ ತಲುಪಿದೆ. ಹಾಗಾಗಿ ಉಚಿತ ಆಸ್ಪತ್ರೆ ಯೋಜನೆಯನ್ನು ಕಂಪೆನಿ ಕೈಬಿಟ್ಟಿದೆ. ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ತನ್ನ ನೌಕರರನ್ನು ವಜಾಗೊಳಿಸುವ ತಯಾರಿ ನಡೆಸುತ್ತಿದೆ. ಇದೀಗ ಸರ್ಕಾರಿ ಆಸ್ಪತ್ರೆಯ ನಿರ್ವಹಣೆಯ ಜವಾಬ್ದಾರಿ ಮತ್ತೆ ಸರ್ಕಾರದ ಹೆಗಲೇರಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ರಘುಪತಿ ಭಟ್ , ಬಿ.ಆರ್ ಶೆಟ್ಟಿಯವರ ಕಂಪನಿ ಅರ್ಧಕ್ಕೆ ಕೈ ಕೊಡುತ್ತೆ ಅನ್ನೋದು ನಮಗೆ ಮೊದಲೇ ಗೊತ್ತಿತ್ತು . ಹಾಗಾಗಿ ಈ ಕುರಿತು ಸಾಕಷ್ಟು ಹೋರಾಟ ನಡೆಸಿಕೊಂಡು ಬಂದಿದ್ದೆವು. ನಮ್ಮ ವಿರೋಧದ ಹೊರತಾಗಿಯೂ ಸಿದ್ದರಾಮಯ್ಯ ಸರಕಾರ ಆಸ್ಪತ್ರೆಯನ್ನು ಬಿಆರ್ ಶೆಟ್ಟರಿಗೆ ವಹಿಸಿತ್ತು. ಇದೀಗ ಬಡವರ ಆಸ್ಪತ್ರೆಯನ್ನು ನಡು ನೀರಲ್ಲಿ ಕೈ ಬಿಟ್ಟಿದೆ. ಆಸ್ಪತ್ರೆಗೆ ಶೀಘ್ರ ಹೊಸ ಸರ್ಕಾರಿ ವೈದ್ಯರ ನೇಮಕ ಮಾಡಲಾಗುವುದು. ಈಗಾಗಲೇ ವೈದ್ಯರ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಪ್ರಕಾರ, ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಗಳಿಂದ ತಮಗೆ ಆಸ್ಪತ್ರೆ ನಡೆಯಲು ಬೇಕಾದ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಬಂದಿದೆ. ಆಸ್ಪತ್ರೆಯನ್ನು ನಡೆಸಲು ಬೇಕಾದ ಎಲ್ಲಾ ಕ್ರಮಕೈಗೊಳ್ಳಲು ನಾವು ಸಿದ್ಧರಿದ್ದೇವೆ. ಸದ್ಯ ಕೆಲವು ವೈದ್ಯರ ನೇಮಕಕ್ಕೆ ಬೇಕಾದ ಪ್ರಕ್ರಿಯೆ ನಡೆಯುತ್ತಿದೆ. ಇಡೀ ಆಸ್ಪತ್ರೆಯನ್ನು ನಡೆಸಲು ನಾವು ರೆಡಿ. ಯಾವುದಕ್ಕೂ ಸರಕಾರದಿಂದ ಬರುವ ಸೂಚನೆಯಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸದ್ಯ ಬಿ.ಆರ್.ಶೆಟ್ಟಿ ತನ್ನ ಕಂಪನಿಯ ಅಧಿಕಾರಿಗಳಿಂದಲೇ ಮೋಸಕ್ಕೊಳಗಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ವಿಶ್ವ ಮಾರುಕಟ್ಟೆಯಲ್ಲಿ ಬಿ.ಆರ್ ಶೆಟ್ಟರ ಎನ್ಎಂ ಸಿ ಕಂಪನಿ ದಿವಾಳಿ ಹಂತ ತಲುಪಿದೆ. ತಾನೇ ಸ್ಥಾಪಿಸಿದ ಕಂಪನಿಯಿಂದ ಬಿಆರ್ ಶೆಟ್ಟಿ ಹೊರಬಂದಿದ್ದಾರೆ.


Spread the love

Exit mobile version