Home Mangalorean News Kannada News ಉಡುಪಿ: ‘ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿ ಇಲ್ಲ’ ; ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ...

ಉಡುಪಿ: ‘ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿ ಇಲ್ಲ’ ; ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ. ಅನುರ್ ರೆಡ್ಡಿ

Spread the love

ಉಡುಪಿ: ಅರಣ್ಯ ಇಲಾಖೆ ಯಾವುದೇ ಜನಪರ, ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯನ್ನುಂಟು ಮಾಡುವುದಿಲ್ಲ. ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಪೂರಕವಾಗಿ ಇಲಾಖೆ ಎಲ್ಲ ಯೋಜನೆಗಳ ಮಾಹಿತಿ ಹಾಗೂ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಆನ್‍ಲೈನ್ ಮಾಡಿರುವುದಾಗಿ ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ. ಅನುರ್ ರೆಡ್ಡಿ ಹೇಳಿದರು.

1

   ಅವರಿಂದು ಜಿಲ್ಲಾ ಪಂಚಾಯತ್‍ನ ವಿ ಎಸ್ ಆಚಾರ್ಯ ಹಾಲ್ ನಲ್ಲಿ ‘ಅರಣ್ಯ ಸಂರಕ್ಷಣಾ ಕಾಯ್ದೆ 1980’ ಕುರಿತ  ವಿಷಯಗಳ ಬಗ್ಗೆ ಅಧಿಕಾರಿಗಳಿಗೆ ಆಯೋಜಿಸಲಾದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಯಾವುದೇ ಅಭಿವೃದ್ಧಿ ಸಂಬಂಧ ಅರಣ್ಯ ಭೂಮಿ ಇದ್ದರೆ ಆ ಕಡತ ವಿಲೇಗೆ ಏಕಗವಾಕ್ಷಿ ಪದ್ಧತಿ ಹಾಗೂ ನೋಡಲ್ ಅಧಿಕಾರಿಯನ್ನಾಗಿ ಅರಣ್ಯ ಸಚಿವಾಲಯ ತಮ್ಮನ್ನು ನೇಮಿಸಿದ್ದು ಇಲಾಖೆ ಅಭಿವೃದ್ಧಿ ಪರವಾಗಿದೆ ಎಂದರು.

ಆದರೆ ಕಾಡು, ಪರಿಸರ ಸಂರಕ್ಷಣೆಯ ಹೊಣೆ ಇಲಾಖೆಗಿದ್ದು, ಅರಣ್ಯ ಭೂಮಿ ಸಂರಕ್ಷಣೆಗೆ ಇಲಾಖೆಯ ಆದ್ಯತೆ. ಮಾನವನ ಬದುಕು ಪರಿಸರ ನಾಶದಿಂದ ಎದುರಿಸಬಹುದಾದ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ಅನುಭವಿಸುತ್ತಿದ್ದು, ಪರಿಸರ, ಕಾಡು ಸಂರಕ್ಷಣೆ ಇಲಾಖೆಯ ಆದ್ಯತೆ ಎಂದರು.

ಆದರೆ ಮೆಸ್ಕಾಂ ಮತ್ತು ನೀರಾವರಿ ಇಲಾಖೆಯಂತಹ ಅನಿವಾರ್ಯ  ಅಭಿವೃದ್ಧಿ ಯೋಜನೆಗಳು ಅರಣ್ಯ ಇಲಾಖೆಯಿಂದಾಗಿ ವಿಳಂಬ ಅಥವಾ ತಡೆಗೆ ಅವಕಾಶವಿಲ್ಲ ಎಂಬುದನ್ನು ಅರಿಯಬೇಕು;  ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹರಿಸಲು ಅರಣ್ಯ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು ಪರಿಹಾರವು ಲಭಿಸಿದೆ. ಅರಣ್ಯ ನಾಶಕ್ಕೆ ಅವಕಾಶವಿಲ್ಲದಂತೆ, ಅನಿವಾರ್ಯ ಅಭಿವೃದ್ಧಿಗೆ ಅರಣ್ಯ ಪ್ರದೇಶ ಅಗತ್ಯವಿದ್ದರೆ ಪರ್ಯಾಯ ಅರಣ್ಯ ನಿರ್ಮಾಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಇಲಾಖೆ ಕಳೆದ 6 ತಿಂಗಳಲ್ಲಿ 80 ರಷ್ಟು ಆನ್‍ಲೈನ್ ಅರ್ಜಿಗಳನ್ನು ಸ್ವೀಕರಿಸಿದ್ದು ಇದರಲ್ಲಿ %90 ಅರ್ಜಿಗಳನ್ನು ಪೂರಕ ದಾಖಲೆ ಇಲ್ಲದಿರುವ ಕಾರಣ ಹಿಂದಿರುಗಿಸಲಾಗಿದೆ ಎಂದರು.

ಮಂಗಳೂರು ವಲಯದ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ ಬಿಜ್ಜೂರು ಅವರು ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದರು.

ಯಾವುದೇ ಯೋಜನೆಗಳನ್ನು ರೂಪಿಸುವಾಗ ಕಂದಾಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಸ್ಥಳೀಯ ಅರಣ್ಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ. ಎಲ್ಲ ಮಾಹಿತಿಗಳನ್ನು ಜಿಪಿಎಸ್ ಮೂಲಕ ಟ್ರ್ಯಾಕ್ ಮಾಡುವ ಸಾಮಥ್ರ್ಯವನ್ನು ಅರಣ್ಯ ಇಲಾಖೆಗಿದ್ದು,ತಕ್ಷಣವೇ ಸೂಕ್ತ ಮಾಹಿತಿಯನ್ನು ನೀಡಲಾಗುತ್ತದೆ. ಹಾಗಾಗಿ ಯೋಜನೆ ರೂಪಿಸುವ ಮೊದಲೇ ಭೂಮಿಯ ಬಗ್ಗೆ ಮಾಹಿತಿ ಇರಲಿ ಎಂದರು.

ಜಿಲ್ಲಾ ಪಂಚಾಯತ್ ಸಿಇಒ ಕನಗವಲ್ಲಿ, ಅಪರ ಜಿಲ್ಲಾಧಿಕಾರಿ ಕುಮಾರ್, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಾಲ್ಕರ್ ಉಪಸ್ಥಿತರಿದ್ದರು. ಆರ್ ಎಫ್ ಒ ಸತೀಶ್ ಸ್ವಾಗತಿಸಿದರು. ಇಲಾಖೆಯ ಇಂಜಿನಿಯರ್‍ಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು. ರಾಜ್ಯದಲ್ಲೇ ಈ ಸಂಬಂಧ ನಡೆಸಿದ ಪ್ರಥಮ ಸಭೆ ಇದಾಗಿದೆ.


Spread the love

Exit mobile version