ಉಡುಪಿ: ಅ.2ರಂದು ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಸಮಾವೇಶ

Spread the love

ಉಡುಪಿ: ಅ.2ರಂದು ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಸಮಾವೇಶ
 

ಉಡುಪಿ: ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಧರ್ಮಸ್ಥಳಧ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಕೈಗೊಂಡಿರುವ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅ.2ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗಾಂಧಿ ಸ್ಮೃತಿ, ಬೃಹತ್ ಜನಜಾಗೃತಿ ಜಾಥಾ ಹಾಗೂ ಸಮಾವೇಶವೊಂದನ್ನು ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಜಿಲ್ಲಾದ್ಯಕ್ಷ ನವೀನ್‌ಚಂದ್ರ ಶೆಟ್ಟಿ ರಟ್ಟಾಡಿ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಉಡುಪಿ ಜಿಲ್ಲೆ ಹಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಉಡುಪಿ ಜಿಲ್ಲೆ ಇದರ ವತಿಯಿಂದ ಈ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ ಎಂದರು.

ಅ.2ರಂದು ಮುಂಜಾನೆ 9:30ಕ್ಕೆ ಉಡುಪಿಯ ಜೋಡುಕಟ್ಟೆಯಿಂದ ಜನಜಾಗೃತಿ ಜಾಥಾ ಪ್ರಾರಂಭಗೊಳ್ಳಲಿದ್ದು, 9ರಿಂದ 10ಸಾವಿರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. ಜಾಥಾದಲ್ಲಿ 30ರಿಂದ 35 ಭಜನಾ ತಂಡಗಳು, ವಿವಿಧ ಬಗೆಯ ಟ್ಯಾಬ್ಲೋಗಳೂ ಇರಲಿದ್ದು, ಜೋಡುಕಟ್ಟೆ ಯಿಂದ ನಗರದ ಪ್ರಮುಖ ಮಾರ್ಗಗಳಲ್ಲಿ ಸಾಗಿ ರಾಜಾಂಗಣದಲ್ಲಿ ಮುಕ್ತಾಯಗೊಳ್ಳಲಿದೆ ಎಂದರು.

ಪೂರ್ವಾಹ್ನ 11ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಮಾವೇಶ ನಡೆಯಲಿದ್ದು, ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಇದನ್ನು ಉದ್ಘಾಟಿಸಲಿದ್ದಾರೆ. ಕಿರಿಯ ಯತಿಗಳಾದ ಶ್ರೀಸುಶ್ರೀಂದ ತೀರ್ಥ ಶ್ರೀಪಾದರು ಉಪಸ್ಥಿತರಿರಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಧಾರ್ಮಿಕ ಚಿಂತಕರಾದ ದಾಮೋದರ ಶರ್ಮ ಬಾರಕೂರು ದಿಕ್ಸೂಚಿ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾದಿಕಾರಿ ಅನಿಲ್‌ಕುಮಾರ್ ಎಸ್. ಎಸ್., ಜಿಲ್ಲೆಯ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಅಪ್ಪಣ್ಣ ಹೆಗ್ಡೆ, ವೇದಿಕೆಯ ಟ್ರಸ್ಟಿ ಡಾ.ಪಿ.ವಿ.ಭಂಡಾರಿ ಭಾಗವಹಿಸಲಿದ್ದಾರೆ ಎಂದರು.

ಮುಂಬಯಿ ಉದ್ಯಮಿ ಆರ್.ಬಿ.ಹೆಬ್ಬಳ್ಳಿ, ವಿವಿಧ ಸಂಘಟನೆಗಳ ದೇವದಾಸ್ ಹೆಬ್ಬಾರ್, ನವೀನ್ ಅಮೀನ್, ಸತ್ಯಾನಂದ ನಾಯಕ್, ದುಗ್ಗೇಗೌಡ, ವಿವೇಕ್ ವಿ.ಪಾಯಸ್ ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ, ವೇದಿಕೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ನವೀನ್ ಅಮೀನ್, ತಾಲೂಕು ಅಧ್ಯಕ್ಷ ಸತ್ಯಾನಂದ ನಾಯಕ್, ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಶಿವಕುಮಾರ್ ಅಂಬಲಪಾಡಿ, ಗಣೇಶ ಆಚಾರ್ಯ ಉಪಸ್ಥಿತರಿದ್ದರು.


Spread the love