ಉಡುಪಿ: ಆದಿಯಲ್ಲಿ ಮನುಷ್ಯ ಭಾಷೆಯ ಬದಲಾಗಿ ಚಿತ್ರ ಕಲೆಯನ್ನೇ ಸಂವಹನ ಮಾಧ್ಯವಾಗಿ ಉಪಯೋಗಿಸುತ್ತಿದ್ದ. ಆದ್ದರಿಂದ ಆದಿಮ ಸಮಾಜದ ಮೊತ್ತಮೊದಲ ಅಭಿವ್ಯಕ್ತಿಯೇ ಚಿತ್ರಕಲೆ. ಭಾರತೀಯ ಚಿತ್ರಕಲೆಗೆ ತನ್ನದೇ ಆದ ಇತಿಹಾಸವಿದ್ದು, ಪುರಾತನ ದೇವಾಲಯಗಳಲ್ಲಿ ಅದನ್ನು ಕಾಣಬಹುದಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು.
ಭಾನುವಾರ ನಗರದ ದೃಷ್ಟಿ ಗ್ಯಾಲರಿಯಲ್ಲಿ ಆಯೋಜಿಸಲಾದ ಹಿರಿಯ ಕಲಾವಿದ ಕೆ.ಪಿ. ಶೆಣೈ ಅವರ ಚಿತ್ರ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರ ಕಲೆಯನ್ನು ಅವಲೋಕಿಸಲು ನೋಡಬೇಕು ಹಾಗೂ ಕಾಣಬೇಕು. ಕೇವಲ ನೋಡಿದರೆ ಚಿತ್ರ ಕಲೆ ದಕ್ಕುವುದಿಲ್ಲ ಅದನ್ನು ಒಳಗಣ್ಣಿನಿಂದ ಕಾಣಬೇಕು ಎಂದರು.
ಕೇವಲ ಧರ್ಮಗ್ರಂಥಗಳು ಮಾತ್ರ ಇತಿಹಾಸದ ಬಗ್ಗೆ ತಿಳಿಸುವುದಿಲ್ಲ. ಚಿತ್ರಕಲೆಗಳು, ಕಲಾಕೃತಿಗಳೂ ನಮಗೆ ಇತಿಹಾಸವನ್ನು ತಿಳಿಸುತ್ತದೆ. ಸಮಾಜವನ್ನು ಕಟ್ಟಿಕೊಡುವ ಆಗರವೂ ಚಿತ್ರಕಲೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಖ್ಯಾತ ವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ವೃದ್ಧಾಪ್ಯವನ್ನು ನಾವು ಸವಾಲಾಗಿ ತೆಗೆದುಕೊಂಡಾಗ ಸಾಧನೆ ಮಾಡಲು ಸಾಧ್ಯ. ಕೆ.ಪಿ. ಶೆಣೈ ಅದಕ್ಕೊಂದು ಉದಾಹರಣೆ. ಇಂದು ದೇಶಕ್ಕಿರುವ ಪ್ರಮುಖ ಸವಾಲು ಕೂಡಾ ವೃದ್ಧಾಪ್ಯ ಮತ್ತು ಹದಿಹರೆಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್ಟಿಸ್ಟ್ ಫಾರಂ ವತಿಯಿಂದ ಕಲಾವಿದ ಕೆ.ಪಿ. ಶೆಣೈ ಅವರನ್ನು ಗೌರವಿಸಲಾಯಿತು. ದೃಷ್ಟಿ ಗ್ಯಾಲರಿಯ ಅಧ್ಯಕ್ಷ ರಮೇಶ್ ರಾವ್, ಕಲಾವಿದ ಕೆ.ಪಿ. ಶೆಣೈ. ಸುರೇಶ್ ಶೆಣೈ ಉಪಸ್ಥಿತರಿದ್ದರು.
ಸುಮನಾ ಶೆಣೈ ಸ್ವಾಗತಿಸಿ, ಆರ್ಟಿಸ್ಟ್ ಫಾರಂನ ಅಧ್ಯಕ್ಷ ಪುರುಷೋತ್ತಮ ಅಡ್ವೆ ವಂದಿಸಿದರು. ಕಾರ್ಯದರ್ಶಿ ಸ.ಕು. ಪಾಂಗಾಳ ಕಾರ್ಯಕ್ರಮ ನಿರೂಪಿಸಿದರು.