ಉಡುಪಿ: ಆರ್.ಜಿ.ಪಿ.ಆರ್.ಎಸ್. ಸಂಘಟನೆಯಿಂದ ಅಶಕ್ತ ಕುಟಂಬಕ್ಕೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಉಡುಪಿ: ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ “ಗಾಂಧಿ 150 “ಕಾರ್ಯಕ್ರಮದಡಿ ಅಶಕ್ತ ಕಡು ಬಡ ಕುಟುಂಬಕ್ಕೆ ಮನೆನಿರ್ಮಾಣ ಸಲುವಾಗಿ ಗುದ್ದಲಿ ಪೂಜೆ ಕಾರ್ಯಕ್ರಮ ಕೊರಂಗ್ರಪಾಡಿ ಜನತಾ ಕಾಲನಿಯಲ್ಲಿ ಸೋಮವಾರ ಜರುಗಿತು.
ಮಹಾತ್ಮಾ ಗಾಂಧಿ ಜನ್ಮ ಶತಾಬ್ದಿ ಪ್ರಯುಕ್ತ ಹಮ್ಮಿಕೊಳ್ಳಲಾದ ಗಾಂಧಿ -150 ಕಾರ್ಯಕ್ರಮದಡಿ ಅಲೆವೂರು ಗ್ರಾಪಂ ವ್ಯಾಪ್ತಿಯ ಕೊರಂಗ್ರಪಾಡಿ ವಾರ್ಡಿನ ಜನತಾ ಕಾಲನಿಯ ಬಡ ಅಶಕ್ತ ಪರಿಶಿಷ್ಟ ಜಾತಿಯ ನಳಿನಿ ಕುಟುಂಬಕ್ಕೆ ಮನೆಯನ್ನು ನಿರ್ಮಿಸಲು ಸಂಘಟನೆ ನಿರ್ಧರಸಿದೆ.
ನಳಿನಿ ಕುಟುಂಬ ತೀರ ಬಡತನದ ಜೀವನ ನಡೆಸುತ್ತಿದ್ದ ಇವರ ಪತಿ ಆರು ವರ್ಷಗಳ ಹಿಂದೆ ತೀರಿಕೊಂಡಿದ್ದು ಸದ್ಯ ತನ್ನ ಮೂವರು ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ಇವರಲ್ಲಿ ಓರ್ವ ಮಗ ಪ್ರಶಾಂತ್ ಹುಟ್ಟು ಅಂಗವಿಕಲನಾಗಿದ್ದು ಉಳಿದ ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 20 ವರ್ಷಗಳಿಂದ ಗುಡಿಸಲಿನಲ್ಲಿ ವಾಸಮಾಡಿಕೊಂಡಿದ್ದ ಮಳೆಗಾಲದಲ್ಲಿ ನೀರು ಸೋರುತ್ತಿದ್ದರೂ ಅದರಲ್ಲೆ ದಿನ ಕಳೆಯುತ್ತಿದ್ದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಎರಡು ಮನೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ಒಂದು ನಳಿನಿ ಕುಟುಂಬವಾದರೆ ಇನ್ನೊಂದು ಕಾರ್ಕಳ ಕಾಂತಾವರದ ಮಾಲತಿ ಶೆಟ್ಟಿ ಎಂಬವರದ್ದಾಗಿದೆ. ಎರಡು ಮನೆಗಳನ್ನು ತಲಾ ನಾಲ್ಕು ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ನಳಿನಯವರ ಮನೆಯ ಕಾಮಗಾರಿ ಅಕ್ಟೋಬರ್ ತಿಂಗಳ ಒಳಗೆ ಪೂರ್ಣಗೊಳಿಸಿ ಗಾಂಧಿ ಜಯಂತಿ ದಿನದಂದು ಹಸ್ತಾಂತರ ಮಾಡಲು ನಿರ್ಧರಿಸಲಾಗಿದೆ.
ಈ ವೇಳೆ ಹಿರಿಯ ಕಾಂಗ್ರೆಸ್ ನಾಯಕರಾದ ವೆರೋನಿಕಾ ಕರ್ನೆಲಿಯೊ, ಎಮ್ ಎ ಗಫೂರ್, ಸರಳಾ ಕಾಂಚನ್, ಡಾ|ಸುನೀತಾ ಶೆಟ್ಟಿ, ಹರೀಶ್ ಕಿಣಿ, ನಾಗೇಶ್ ಉದ್ಯಾವರ, ಕಿಶನ್ ಹೆಗ್ಡೆ ಕೊಳಕೆಬೈಲು, ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಂಯೋಜಕಿ ರೋಶನಿ ಒಲಿವೇರಾ ಹಾಗೂ ಇತರರು ಉಪಸ್ಥಿತರಿದ್ದರು.