ಉಡುಪಿ: ಆಶ್ರಯದಾತ ಆಟೋ ಯೂನಿಯನ್ ನ ರಿಕ್ಷಾ ಚಾಲಕರ ಪ್ರತಿಭಟನೆಗೆ ಕೊನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇದೀಗ ಹಾಳಾದ ಕರಾವಳಿ ಬೈಪಾಸ್- ಮಲ್ಪೆ ರಸ್ತೆಗೆ ಕಾಂಕ್ರೀಟ ಕಾಮಗಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯಿಂದ ಬ್ಯಾನರ್ ರಾಜಕೀಯ ಕೂಡಾ ಆರಂಭವಾಗಿದೆ.
ಕರಾವಳಿ ಬೈಪಾಸ್- ಮಲ್ಪೆಯ ರಸ್ತೆಯು ಕಳೆದ ಎರಡು ತಿಂಗಳಿನಿಂದ ತೀರಾ ಹದಗೆಟ್ಟು ಜನಸಾಮಾನ್ಯರಿಗೆ , ಪ್ರವಾಸಿಗರಿಗೆ, ರಿಕ್ಷಾ ಸೇರಿದಂತೆ ವಾಹನ ಸವಾರರಿಗೆ ರಸ್ತೆಯಲ್ಲಿ ಸಂಚರಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ರಸ್ತೆಯ ಅವ್ಯವಸ್ಥೆಯ ವಿರುದ್ದ ಆಶ್ರಯದಾತ ಆಟೋ ಯೂನಿಯನ್ ಅದ್ಯಕ್ಷ ರಮೇಶ್ ಶೆಟ್ಟಿ ನೇತೃತ್ವದಲ್ಲಿ ಆಟೋ ಚಾಲಕರು ಮತ್ತು ಮಾಲಕರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿತ್ತು. ಅಲ್ಲದೇ 15 ದಿನಗಳ ಗಡುವನ್ನು ಕೂಡಾ ನೀಡಿತ್ತು. ಆದರೆ 15 ದಿನ ಕಳೆದರೂ ಯಾವುದೇ ರೀತಿಯಲ್ಲಿ ಅಧಿಕಾರಿಗಳು ಸ್ಪಂದಿಸದ ಕಾರಣ ಹಾಗೂ ರಾಜಕೀಯ ಮುಖಂಡರು ಕೇವಲ ಆಶ್ವಾಸನೆಯನ್ನ ನೀಡಿದ ಹಿನ್ನಲೆಯಲ್ಲಿ ಆಶ್ರಯದಾತ ಆಟೋ ಯೂನಿಯನ್ ನೇತೃತ್ವದಲ್ಲಿ ಆಟೋ ಚಾಲಕರು ಮತ್ತೆ ಶ್ರಮದಾನ ಮಾಡುವ ಮೂಲಕ ಆಡಳಿತ ವರ್ಗದ ವಿರುದ್ದ ವಿನೂತನ ಪ್ರತಿಭಟನೆಯನ್ನ ನಡೆಸಿದ್ದರು. ಇದೀಗ ಆಡಳಿತ ವರ್ಗದ ಅಧಿಕರಿಗಳು ಎಚ್ಚೆತ್ತಿದ್ದು ಕರಾವಳಿ ಬೈಪಾಸ್-ಮಲ್ಪೆ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಲಾಭ ಪಡೆಯಲು ಬಿಜೆಪಿಯ ಹುನ್ನಾರ, ಬ್ಯಾನರ್ ರಾಜಕೀಯ ಶುರು : ರಸ್ತೆ ಕಾಮಗಾರಿ ಆರಂಭಗೊಳ್ಳುತ್ತಿದ್ದಂತೆಯೇ ಇತ್ತ ಬಿಜೆಪಿಯ ಬ್ಯಾನರ್ ರಾಜಕೀಯ ಕೂಡಾ ಆರಂಭವಾಗಿದೆ. ರಸ್ತೆಯ ಬಗ್ಗೆ ಇಷ್ಟರವರೆಗೆ ಪ್ರತಿಭಟನೆ ನಡೆಸದ ಬಿಜೆಪಿ ಕೃಪಾಪೋಷಿತ ಆಟೋ ಯೂನಿಯನ್ ಇದೀಗ ರಾಜಕೀಯ ರಹಿತ ವಾದ ಆಶ್ರಯದಾತ ಆಟೋ ಯೂನಿಯನ್ ಪ್ರತಿಭಟನೆ ನಡೆಸಿ ರಸ್ತೆ ದುರಸ್ಥಿಯ ಬಗ್ಗೆ ಆಗ್ರಹ ನಡೆಸುತ್ತಿದ್ದಂತೆಯೇ ನಿದ್ದೆಯಿಂದ ಎದ್ದು ಕುಳಿತಿದ್ದು ಈ ರಸ್ತೆ ರಿಪೇರಿಗೆ ನಾವೇ ಕಾರಣ ಎಂದು ಎಲ್ಲೆಡೆ ಬ್ಯಾನರ್ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಾಜಿ ಶಾಸಕ ರಘುಪತಿ ಭಟ್ ಅವರಿಂದಲೇ ಈ ಕಾಮಗಾರಿ ಆರಂಭವಾಗಿದೆ ಎಂಬ ಅರ್ಥದಲ್ಲಿ ಬ್ಯಾನರ್ ಅಳವಡಿಸಲಾಗಿದ್ದು ಈ ಮೂಲಕ ಯಾರದ್ದೋ ಪ್ರತಿಭಟನೆಯ ಲಾಭವನ್ನು ಪಡೆಯಲು ಹುನ್ನಾರ ನಡೆಸಿದೆ.ಈ ಬಗ್ಗೆ ಜನರಿಂದ, ಆಶ್ರಯದಾತ ಆಟೋ ಯೂನಿಯನ್ ಸದಸ್ಯರು ಆಕ್ರೋಶವನ್ನು ಕೂಡಾ ವ್ಯಕ್ತಪಡಿಸಿದ್ದಾರೆ.