ಉಡುಪಿ ಕಾಂಗ್ರೆಸಿಗರ ಕಾರುಗಳ ಮೇಲೆ ‘ಚೌಕಿದಾರ್ ಚೋರ್ ಹೈ’ ಸ್ಟಿಕ್ಕರ್ !
ಉಡುಪಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರು ಸದಾ ದೇಶದ ಪ್ರಧಾನಿಯನ್ನು ದೇಶ್ ಕಾ ಚೌಕಿದಾರ್ ಚೋರ್ ಹೈ ಎಂದು ಅಪಹಾಸ್ಯ ಮಾಡುತ್ತಿರುವುದು ದೇಶದಾದ್ಯಂತ ಚರ್ಚೆಯ ವಿಚಾರವಾಗಿದೆ.
ಈ ನಡುವೆ ಉಡುಪಿ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ತಮ್ಮ ಕಾರಿನ ಮೇಲೆ ಚೌಕಿದಾರ್ ಚೋರ್ ಹೈ ಎಂಬ ಘೋಷಣೆಯ ಸ್ಟಿಕ್ಕರನ್ನು ಅಂಟಿಸಿಕೊಳ್ಳುವುದರ ಮೂಲಕ ಸುದ್ದಿಯಲ್ಲಿದ್ದಾರೆ.
ಕೆಲವು ದಿನಗಳ ಹಿಂದೆ ಇಂದೋರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹಾಗೂ ಸ್ಥಳೀಯ ನಾಯಕರ ಭಾವಚಿತ್ರಗಳೊಂದಿಗೆ ದೇಶ್ ಕಾ ಚೌಕಿದಾರ್ ಚೋರ್ ಹೈ ಎಂಬ ಘೋಷಣೆಯ ಸ್ಟಿಕ್ಕರನ್ನು ರೈಲ್ವೆ ನಿಲ್ದಾಣಗಳಲ್ಲಿ ಅಂಟಿಸಿ ಸುದ್ದಿಯಾಗಿತ್ತು.
ಈ ಕುರಿತು ಗಂಭೀರವಾಗಿ ಪರಿಗಣಿಸಿದ ರೈಲ್ವೆ ಇಲಾಖೆ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿತ್ತು. ಚುನಾವಣಾ ಅಧಿಕಾರಿಗಳೂ ಕೂಡ ಇಬ್ಬರ ಮೇಲೆ ಕೇಸುಗಳನ್ನು ದಾಖಲಿಸಿದ್ದರು.
ಆದರೆ ಉಡುಪಿಯಲ್ಲಿ ಸ್ಟಿಕ್ಕರನ್ನು ತಯಾರಿಸುವಾಗ ಚುನಾವಣಾ ಅಧಿಕಾರಿಗಳ ಕೇಸುಗಳಿಂದ ಬಚಾವಾಗುವ ಎಚ್ಚರಿಕೆ ವಹಿಸಿರುವ ಕಾಂಗ್ರೆಸ್ ನಾಯಕರು ಎಲ್ಲಿಯೂ ಪಕ್ಷದ ಚಿಹ್ನೆ ಅಥವ ನಾಯಕರ ಭಾವಚಿತ್ರಗಳನ್ನು ಉಪಯೋಗಿಸದೆ ಚೌಕಿದಾರ್ ಚೋರ್ ಹೈ ಎಂಬ ಘೋಷಣೆಯನ್ನು ಮಾತ್ರ ಮುದ್ರಿಸಿದ್ದಾರೆ.
ಇದೇ ವೇಳೆ ಭಾರತೀಯ ಜನತಾ ಪಾರ್ಟಿಯವರು ಕೂಡ ಇದರಲ್ಲಿ ಏನು ಹಿಂದೆ ಬಿದ್ದಿಲ್ಲ. ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರುಗಳು ಕೂಡ ತಮ್ಮ ಕಾರುಗಳ ಮೇಲೆ ನಾನೂ ಚೌಕಿದಾರ ಎಂಬ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುತ್ತಿದ್ದಾರೆ.