ಉಡುಪಿ: ಕ್ವಾರಂಟೈನ್ ಸೆಂಟರ್ ನಿಂದ ಬಿಟ್ಟದ್ದೇ ಮುಳುವಾಯ್ತು, 73 ಪಾಸಿಟಿವ್ ಸೋಂಕಿತರಲ್ಲಿ ಐವರ ಫೋನ್ ಸ್ವಿಚ್ ಆಫ್!
ಉಡುಪಿ: ಪ್ರಜ್ಞಾವಂತರ ಜಿಲ್ಲೆ ಎಂದೇ ಕರೆಸಿಕೊಂಡ ಉಡುಪಿಗೆ ಕರೋನಾ ಮಹಾಮಾರಿ ಆಘಾತದ ಮೇಲೆ ಆಘಾತ ತಂದೊಡ್ಡುತ್ತಿದೆ.ಉಡುಪಿಯಲ್ಲಿ ಸೋಮವಾರ ಮತ್ತೆ 73 ಕರೋನ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲೆಯ ಜನ ಭಯದಲ್ಲೇ ದಿನ ಕಳೆಯುವಂತಾಗಿದೆ.
ರಾಜ್ಯ ಸರಕಾರದ ಸೂಚನೆಯಂತೆ 7 ದಿನ ಕ್ವಾರಂಟೈನ್ ಪೊರೈಸಿದವರನ್ನು ಕೋವಿಡ್ -19 ಪರೀಕ್ಷೆಯ ವರದಿ ಬರುವ ಮೊದಲೇ ಕ್ವಾರಂಟೈನ್ ಸೆಂಟರ್ ನಿಂದ ಮನೆಗೆ ಹೋಗಲು ಬಿಟ್ಟಿರುವುದು ಈಗ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕಳೆದ ತಿಂಗಳು ಹೊರರಾಜ್ಯಗಳಿಂದ ಉಡುಪಿಗೆ ಆಗಮಿಸಿರುವ 7,500ಕ್ಕೂ ಅಧಿಕ ಜನರು ಜಿಲ್ಲೆಯ ಪಾಲಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದಾರೆ. ಸೋಮವಾರ ಬಂದಿರುವ ಫಲಿತಾಂಶದಲ್ಲಿ ಕೇವಲ ಮಹಾರಾಷ್ಟ್ರದಿಂದಲೇ ಬಂದಿರುವ 61 ಜನರಲ್ಲಿ ಕರೋನಾ ಪತ್ತೆಯಾಗಿದೆ. ಈ ಪೈಕಿ ಆರು ಮಕ್ಕಳಿದ್ದು ಸಂಪರ್ಕ ಪತ್ತೆಯಾಗದ 37 ಪಾಸಿಟಿವ್ ಕೇಸ್ ಗಳು ಇವೆ ಎಂದು ಅರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ 37 ಜನರನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಭಾರಿ ತಲೆನೋವಾಗಿದ್ದು, ಇದರಲ್ಲಿ ಈಗಾಗಲೇ 22 ಸೋಂಕಿತರ ವಿಳಾಸವನ್ನು ಪತ್ತೆಹಚ್ಚುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಆದರೆ ಐದು ಜನರು ಮಾತ್ರ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ಕೂತಿರೋದು ರಿಂದ ಇವರನ್ನು ಪತ್ತೆ ಹಚ್ಚುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿಗ ಜಿ ಜಗದೀಶ್ ಅವರು.
ಮುಂಬೈ ಜೊತೆ ದುಬೈನಿಂದ ಬಂದವರು ಕೂಡ ಜಿಲ್ಲೆಗೆ ವೈರಸ್ ಹೊತ್ತು ತಂದಿದ್ದು ಇಂದು ಬಂದ ವರದಿಯಲ್ಲಿ ಮೂವರು ದುಬಾಯಿ ಲಿಂಕ್ ಹೊಂದಿರುವುದು ಖಚಿತವಾಗಿದೆ. ದುಬೈನಿಂದ ಬಂದ ಕರೋನಾ ಸೋಂಕಿತರ ಸಂಖ್ಯೆ ಹದಿನಾಲ್ಕಕ್ಕೆ ಏರಿಕೆಯಾಗಿದೆ. ಇತ್ತ ಮಹಾರಾಷ್ಟ್ರದಿಂದ ಉಡುಪಿಗೆ ಬಂದವರ ಪೈಕಿ ಈವರೆಗೆ 222 ಜನರಲ್ಲಿ ಕರೋನವೈರಸ್ ಕಂಡುಬಂದಿದೆ.
ಪಾಸಿಟಿವ್ ಕೇಸ್ ಗಳು ಈ ರೀತಿ ಹೆಚ್ಚುತ್ತಿದ್ದರೂ ಎಲ್ಲವನ್ನೂ ಎದುರಿಸುತ್ತೇವೆ ಎಂದು ಸಜ್ಜಾಗಿ ಕುಳಿತಿದ್ದ ಉಡುಪಿ ಜಿಲ್ಲಾಡಳಿತಕ್ಕೆ ಇದೀಗ ಪೊಲೀಸರಿಗೆ ಸೋಂಕು ಅಂಟಿರುವುದು ಭಾರಿ ಹಿನ್ನಡೆ ಉಂಟು ಮಾಡಿದೆ. ಕಳೆದ ಕೆಲ ದಿನಗಳ ಹಿಂದೆ ಕಾರ್ಕಳ ಅಜೆಕಾರು ಮತ್ತು ಬ್ರಹ್ಮಾವರ ಠಾಣೆಯ 4 ಪೊಲೀಸರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿತ್ತು ಸೋಮವಾರ ಮತ್ತೆ ಅವರಿಗೆ ಕರೋನಾ ಮಹಾಮಾರಿ ವಕ್ಕರಿಸಿದೆ. ಶಂಕರನಾರಾಯಣ ಠಾಣೆಯ ಮಹಿಳಾ ಸಿಬ್ಬಂದಿಗೆ ಒಬ್ಬರಿಗೆ ಕೋರೋನಾ ಬಂದ ಕಾರಣ ಪೊಲೀಸ್ ಸ್ಟೇಷನ್ ಕಂಟೋನ್ಮೆಂಟ್ ಝೋನ್ ಆಗಿ ಪರಿವರ್ತನೆಗೊಂಡಿದೆ. ಇನ್ನು ಉಡುಪಿ ನಗರ ಭಾಗದಲ್ಲಿರುವ ಸಶಸ್ತ್ರ ಮೀಸಲು ಪಡೆಯ ವಸತಿಗೃಹ ಕೂಡ ನಿರ್ಬಂಧಿತ ಪ್ರದೇಶ ವಾಗುವ ಸಾಧ್ಯತೆ ಇದೆ ಏಕೆಂದರೆ ಸಶಸ್ತ್ರ ಮೀಸಲು ಪಡೆಯ ನಾಲ್ಕು ಜನ ಪೊಲೀಸರಿಗೆ ಕರೋನ ವೈರಸ್ ದಾಳಿ ಇಟ್ಟಿದೆ.
ಜಿಲ್ಲೆಯ ಇನ್ನೂ ಆರು ಸಾವಿರಕ್ಕೂ ಅಧಿಕ ವರದಿಗಳು ಬರಲು ಬಾಕಿ ಇದ್ದು ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಹೀಗಾಗಿ ತಾಲೂಕು ಆಸ್ಪತ್ರೆಗಳನ್ನು ಬಳಸಿಕೊಳ್ಳುವ ಅನಿವಾರ್ಯತೆ ಎದುರಾಗಿದ್ದು ರೋಗ ಲಕ್ಷಣವಿರದ ಪಾಸಿಟಿವ್ ರೋಗಿಗಳನ್ನು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಹೆಚ್ಚು ಅಪಾಯದ ಸಾಧ್ಯತೆ ಇರುವ ವೃದ್ಧರು ಮಕ್ಕಳು ಗರ್ಭಿಣಿಯರು ಮತ್ತು ಶೀತಜ್ವರ ಹೆಚ್ಚಾಗಿರುವ ರೋಗಿಗಳನ್ನು ಜಿಲ್ಲಾ ಕೋ ಬೇಡ ಆಸ್ಪತ್ರೆಗೆ ರವಾನಿಸುವ ಕೆಲಸ ಈಗಾಗಲೇ ಆರಂಭಗೊಂಡಿದೆ. ಕೋವಿಡ್ 19 ಆವರಿಸಿರುವ ಐದು ಮಂದಿ ಫೋನ್ ಸ್ವಿಚ್ ಆಫ್ ಮಾಡಿರೋದು ಸದ್ಯದ ಅತೀ ದೊಡ್ಡ ಆತಂಕ. ಫೋನ್ ಸ್ವಿಚ್ ಆಫ್ ಮಾಡಿದ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತೊಡಗಿದೆ.