ಉಡುಪಿ: ಉಡುಪಿಯ ಸ್ಥಳೀಯ ಪ್ರತಿಭೆಗಳಿಂದ ಉಡುಪಿ ಆಸುಪಾಸಿದಲ್ಲಿ ಚಿತ್ರೀಕರಣವಾಗಿರುವ ಸರ್ವಧರ್ಮ ಸಮನ್ವಯ ವಸ್ತುವಿನ ತುಳು ಚಲನಚಿತ್ರ ‘ಗುಡ್ಡೆದ ಭೂತ’ ನವೆಂಬರ್‍ನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಸಂದೀಪ್ ಪಣಿಯೂರು ತಿಳಿಸಿದ್ದಾರೆ.
ಸುಮಾರು 25 ಲಕ್ಷ ರೂ. ಬಜೆಟ್‍ನಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮುಂದಿನ ತಿಂಗಳು ಧ್ವನಿಸುರುಳಿ ಬಿಡುಗಡೆ ಮಾಡಲಾಗುವುದು ಎಂದು ಉಡುಪಿಯಲ್ಲಿ ತಿಳಿಸಿದರು.
ತಮಿಳು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ಚೆನ್ನೈನಲ್ಲಿ ಚಿತ್ರರಂಗದ ಬಗ್ಗೆ ತಿಳಿದುಕೊಂಡಿದ್ದೇನೆ. ಕನ್ನಡದಲ್ಲಿ `ಚಿಗುರು’ ಚಿತ್ರಕ್ಕೆ ಸಹ ನಿರ್ದೇಶನ ಮಾಡಿದ್ದೇನೆ.ಸ್ನೇಹಿತರು ತುಳುಚಿತ್ರರಂಗದಲ್ಲಿಯೂ ಕೆಲಸ ಮಾಡುವಂತೆ ಒತ್ತಾಯಿಸಿದ್ದರಿಂದ `ಗುಡ್ಡೆದ ಭೂತ’ ವನ್ನು ನಿರ್ದೇಸಿದ್ದೇನೆ. ಇದು ಮೊದಲ ತುಳು ಚಿತ್ರವಾಗಿದ್ದು, ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿರುವುದಾಗಿ ತಿಳಿಸಿದರು.
ಚಿತ್ರದಲ್ಲಿ ಹಾಸ್ಯ, ಹಾರರ್, ಜೊತೆಗೆ ನವಿರಾದ ಪ್ರೇಮ ಕಥನವೂ ಇದೆ. ಚಿತ್ರದ ನಾಯಕನಾಗಿ ಸಂದೀಪ್ ಭಕ್ತ ಅಭಿನಯಿಸಿದ್ದಾರೆ. ಈ ಹಿಂದೆ ಅವರು ತುಳು ಧಾರಾವಾಹಿಯೊಂದರಲ್ಲಿ ಅಭಿನಯಿಸಿದ ಅನುಭವವಿದೆ. ನಾಯಕಿ ಅಶ್ವಿತಾ ಅವರು ಈ ಹಿಂದೆ ಗುರ್ಬಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಸ್ಥಳೀಯ ನಟ ನಟಿಯರು ಅಭಿನಯಿಸಿದ್ದಾರೆ ಎಂದರು.
ನಾಯಕಿ ಅಶ್ವಿತಾ ಮಾತನಾಡಿ, ಚಿತ್ರವು ಒಳ್ಳೆಯ ಕಥೆ ಹೊಂದಿದೆ. ಚಿತ್ರತಂಡ ಸಹಕಾರ ನೀಡಿದೆ. ಮೇ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಾಗಿತ್ತು. ಇದರಿಂದ ಓದಿಗೆ ಯಾವುದೇ ಸಮಸ್ಯೆಯಾಗಿಲ್ಲ. ಈ ಹಿಂದೆ ನಾಯಕಿಯ ಪಾತ್ರ ನಿರ್ವಹಿಸಿದ ಗುರ್ಬಿ ಚಿತ್ರ ಅಕ್ಟೋಬರ್‍ನಲ್ಲಿ ತೆರೆ ಕಾಣಲಿದೆ ಎಂದು ತಿಳಿಸಿದರು.
ಚಿತ್ರದ ನಾಯಕ ಸಂದೀಪ್ ಭಕ್ತ, ಛಾಯಾಗ್ರಾಹಕ ಸುರೇಂದ್ರ ಪಣಿಯೂರು ಉಪಸ್ಥಿತರಿದ್ದರು.