ಉಡುಪಿ – ಚಿಕ್ಕಮಗಳೂರು ಕ್ಷೇತ್ರವನ್ನು 5 ವರ್ಷಗಳಲ್ಲಿ ಅನಾಥರಾಗಿಸಿದ್ದು ಶೋಭಾ – ಪ್ರಮೋದ್ ಮಧ್ವರಾಜ್
ಉಡುಪಿ: ನಾಯಕರು ಮತ್ತು ಕಾರ್ಯಕರ್ತರಿಂದ ಗೋ ಬ್ಯಾಕ್ ಚಳುವಳಿಗೆ ಕಾರಣರಾದ ಸಂಸದೆ ಶೋಭ ಕರಂದ್ಲಾಜೆಯನ್ನು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಮತದಾರರು ಸಂಪೂರ್ಣವಾಗಿ ಈ ಬಾರಿಯ ಚುನಾವಣೆಯಲ್ಲಿ ಗೋ ಬ್ಯಾಕ್ ಶೋಭಾ ಹೇಳಲು ತಯಾರಾಗಿದ್ದಾರೆ. ಈ ಬಾರಿಯ ಚುನಾವಣೆ ಮೋದಿ ಮತ್ತು ಪ್ರಮೋದ್ ನಡುವಿನ ಚುನಾವಣೇಯಲ್ಲಿ ಕಾರಣ ಮೋದಿಯವರು ವಾರಾಣಾಸಿ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದಾರೆ. ಇದು ನೇರವಾಗಿ ಶೋಭಾ ಕರಂದ್ಲಾಜೆ ಮತ್ತು ಪ್ರಮೋದ್ ಮಧ್ವರಾಜ್ ನಡುವಿನ ಚುನಾವಣೆಯಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ – ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಲೇವಡಿ ಮಾಡಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಅವರು ಭಾನುವಾರ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸ ಮಾತನಾಡಿ, ಕಳೆದ 5 ವರ್ಷಗಳಲ್ಲಿ ಈ ಭಾಗದಿಂದ ಆಯ್ಕೆಯಾದ ಸಂಸದರು ಕ್ಷೇತ್ರ ಹಾಗೂ ಕ್ಷೇತ್ರದ ಮತದಾರರನ್ನು ಅನಾಥರನ್ನಾಗಿಸಿದ್ದಾರೆ. ಕಳೆದ 5 ವರ್ಷಗಳಲ್ಲಿ ಶೋಭಾ ಸಂಸದೆಯಾಗಿ ಇದ್ದಾರೋ ಇಲ್ಲವೊ ಗೊತ್ತಾಗಿಲ್ಲ ಆದ್ದರಿಂದ ಬಿಜೆಪಿ ಕಾರ್ಯಕರ್ತರು, ಶಾಸಕರು ಶೋಭಾ ಅವರನ್ನು ಸಂಪೂರ್ಣ ವಿರೋಧಿಸಿದ್ದಾರೆ. ಶೋಭಾ ಅವರಿಗೆ ಈಗ ಕೇವಲ ಮೋದಿ ಮಾತ್ರ ಆಸರೆಯಾಗಿದ್ದಾರೆ ಆದ್ದರಿಂದ ಮೋದಿಯವರ ಅಲೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಶೋಭಾ ಹೊಂದಿದ್ದಾರೆ. ಆದರೆ ಈ ಬಾರಿಯ ಚುನಾವಣೇಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದರು.
ಶೋಭಾ ಸಂಸದರಾಗಿ ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಮರಳು ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ತಾನು ಸಚಿವನಾಗಿದ್ದಾಗ 9 ಲಕ್ಷ ಮೆಟ್ರಿಕ್ ಟನ್ ಮರಳು ತೆಗೆಯಲು ಅವಕಾಶ ಇದ್ದು 6 ಲಕ್ಷ ಮೆಟ್ರಿಕ್ ಟನ್ ಮರಳನ್ನು ತೆಗೆಯಲಾಗಿದೆ. ಒಟ್ಟು 28 ಬ್ಲಾಕ್ 165 ಜನರಿಗೆ ಹಂಚಿ ನೀಡಲಾಗಿದೆ ಆದರೆ ಈ ಬಾರಿ ಮರಳು ಸಿಗದೆ ಜನರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿಸುವಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕೂಡ ಕಾರಣವಾಗಿದ್ದಾರೆ. ಸಿ ಆರ್ ಝಡ್ ನಿಯಮಾವಳಿಗಳನ್ನು ಒರ್ವ ಸಂಸದೆಯಾಗಿ ಕೇಂದ್ರ ಸರಕಾರದಲ್ಲಿ ಬದಲಾಯಿಸಿಕೊಂಡು ಬರಲು ಕೂಡ ಅವರಿಗೆ ಸಾಧ್ಯವಾಗಿಲ್ಲ. ಕಳೆದ ಚುನಾವಣೇಯಲ್ಲಿ ಅಪಪ್ರಚಾರದಿಂದ ನನಗೆ ಸೋಲಾಗಿದೆ ಆದರೆ ಈ ಬಾರಿ ನಾನು ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರಕಾರದ ಅಭ್ಯರ್ಥಿಯಾಗಿದ್ದು ಎರಡೂ ಪಕ್ಷಗಳ ಕಾರ್ಯಕರ್ತರು ಬಿಜೆಪಿ ಸೋಲಿಸಲು ಪಣ ತೊಟ್ಟಿದ್ದಾರೆ. ಭಿನ್ನಾಭಿಪ್ರಾಯ ಮರೆತು ಎರಡೂ ಪಕ್ಷಗಳ ಕಾರ್ಯಕರ್ತರು ಒಂದಾಗ್ತಾರೆ ಎಂದರು.
ಶಾಸಕನಾಗಿದ್ದಾಗ ಉಡುಪಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಈಗ ಎಂಟು ವಿಧಾನಸಭಾ ಕ್ಷೇತ್ರಕ್ಕೆ ಕೆಲಸ ಮಾಡುವ ಅವಕಾಶ ದೊರಕಿದೆ. ಸಂಸದೆ ಶೋಭಾ ಕರಂದ್ಲಾಜೆ ಈ ಕ್ಷೇತ್ರವು ಕಾಂಗ್ರೆಸ್ ಪಕ್ಷದಿಂದ ಮುಕ್ತವಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಮುಂದೆ ಮೈತ್ರಿ ಪಕ್ಷವು ಬಿಜೆಪಿಗೆ ಪೈಪೋಟಿ ನೀಡುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಹೇಗೆ ಗೆಲ್ಲಬೇಕು, ಹೇಗೆ ಸೋಲಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ.
ಬಿಜೆಪಿ ಕಾರ್ಯಕರ್ತರು ‘ಗೋ ಬ್ಯಾಕ್ ಶೋಭಾ’ ಎಂದು ಚಳವಳಿ ಮಾಡಿದ್ದಾರೆ. ಕಾರಣ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ’ ಎಂದರು.
‘ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆ ನಡೆದಿದೆ. ಕಣಕ್ಕಿಳಿಯುವಂತೆ ಮೈತ್ರಿಯ ಎರಡೂ ಪಕ್ಷಗಳ ನಾಯಕರ ಸಮ್ಮತಿ ನೀಡಿದ್ದಾರೆ. ಇದೇ 25ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೇನೆ. ಎರಡೂ ಪಕ್ಷದವರು ಜಂಟಿಯಾಗಿ ಪ್ರಚಾರ ಮಾಡುತ್ತೇವೆ’ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಎಮ್ ಎ ಗಫೂರ್, ಜಿ ಎ ಬಾವಾ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಮೀನುಗಾರಿಕಾ ಕಾಂಗ್ರೆಸ್ ಅಧ್ಯಕ್ಷ ಯು ಆರ್ ಸಭಾಪತಿ, ಕೆಪಿಸಿಸಿ ಸದಸ್ಯ ದಿನೇಶ್ ಪುತ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಯತೀಶ್ ಕರ್ಕೇರಾ ಹಾಗೂ ಇತರರು ಉಪಸ್ಥಿತರಿದ್ದರು.