ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸೊರಕೆ, ಪ್ರಮೋದ್, ಆರತಿ, ವಿಜಯ್ ಕುಮಾರ್ ಆಕಾಂಕ್ಷಿಗಳು – ಜಯಮಾಲಾ

Spread the love

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸೊರಕೆ, ಪ್ರಮೋದ್, ಆರತಿ, ವಿಜಯ್ ಕುಮಾರ್ ಆಕಾಂಕ್ಷಿಗಳು – ಜಯಮಾಲಾ

ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ನಾಲ್ಕು ಮಂದಿ ಆಕಾಂಕ್ಷಿಗಳಿದ್ದು, ಪಕ್ಷದ ಹೈಕಮಾಂಡ್ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ ಹೇಳಿದ್ದಾರೆ.

ಅವರು ಬುಧವಾರ ಮಣಿಪಾಲದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಮಾತನಾಡಿ ಪಕ್ಷದಲ್ಲಿ ಪ್ರತಿಯೊಬ್ಬರಿಗೂ ಟಿಕೇಟ್ ಕೇಳುವ ಅವಕಾಶ ಇದೆ. ಪಕ್ಷದಲ್ಲಿ ಈಗಾಗಲೇ ನಾಲ್ಕು ಮಂದಿ ಪ್ರಮುಖ ಟಿಕೇಟ್ ಆಕಾಂಕ್ಷಿಗಳಿದ್ದಾರೆ. ಉಡುಪಿ ಜಿಲ್ಲೆಯಿಂದ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್ ಆಕಾಂಕ್ಷಿಗಳಾದರೆ, ಚಿಕ್ಕಮಗಳೂರು ಜಿಲ್ಲೆಯಿಂದ ಅನಿವಾಸಿ ಭಾರತೀಯ ಸಂಘದ ಅಧ್ಯಕ್ಷೆ ಡಾ|ಆರತಿ ಕೃಷ್ಣ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ಕುಮಾರ್ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಎಐಸಿಸಿ ಮತ್ತು ಕೆಪಿಸಿಸಿ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಪಕ್ಷದ ನಾಯಕರ ಅಭಿಪ್ರಾಯಗಳನ್ನು ಕ್ರೋಡಿಕರಿಸಿದ್ದಾರೆ. ಪಕ್ಷದ ಹೈಕಮಾಂಡ್ ಈ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಸಚಿವೆ ಡಾ|ಜಯಮಾಲಾ ಅಭ್ಯರ್ಥಿಯಾಗುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ ನಾನು ಎಂದಿಗೂ ತನಗೆ ಲೋಕಸಭಾ ಟಿಕೇಟ್ ಬೇಕು ಎಂದು ಕೇಳಿಲ್ಲ. ಕಾಂಗ್ರೆಸ್ ಪಕ್ಷ ನನಗೆ ತಾಯಿ ಸಮಾನವಾಗಿದ್ದು, ಒಂದು ವೇಳೆ ಪಕ್ಷ ಸೂಚಿಸದರೆ ಅದರ ಬಗ್ಗೆ ಚಿಂತನೆ ನಡೆಸುವೆ. ಸದ್ಯ ನನಗೆ ಪಕ್ಷ ಮಂತ್ರಿ ಸ್ಥಾನ ನೀಡಿದ್ದು ಅದರಲ್ಲೇ ಸಂತೋಷವಾಗಿದ್ದೇನೆ ಎಂದರು.

ಬಿಜೆಪಿ ಪಕ್ಷದಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕುರಿತು ಗೋ ಬ್ಯಾಕ್ ಶೋಭಾ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಸಚಿವೆ ಜಯಮಾಲಾ ಅದು ಅವರ ಪಕ್ಷದ ಆಂತರಿಕ ವಿಚಾರ ಅದರ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬಿಜೆಪಿಯವರ ವೈಫಲ್ಯಗಳೇ ನಮ್ಮ ಪಕ್ಷಕ್ಕೆ ಚುನಾವಣೆ ಗೆಲ್ಲಲು ಪ್ರಮುಖ ವಿಷಯ ಅದನ್ನು ಬಿಟ್ಟು ಅವರನ್ನು ಟೀಕಿಸುವುದು ನನ್ನ ಕೆಲಸವಲ್ಲ ಎಂದರು.


Spread the love