ಉಡುಪಿ-ಚಿಕ್ಕಮಗಳೂರು ಸಮಗ್ರ ಅಭಿವೃದ್ದಿಗೆ ಪ್ರಮೋದ್ ಗೆಲುವು ಅತಿ ಅಗತ್ಯ -ಜನಾರ್ದನ ತೋನ್ಸೆ
ಉಡುಪಿ: ಉಡುಪಿ ಶಾಸಕರಾಗಿ ಮಂತ್ರಿಯಾಗಿ ಒರ್ವ ಮಾದರಿ ಜನಪ್ರತಿನಿಧಿಯಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ಪ್ರಮೋದ್ ಮಧ್ವರಾಜ್ ಅವರನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸುವುದರ ಮೂಲಕ ಸಂಸತ್ತಿಗೆ ಕಳುಹಿಸಿಕೊಡಬೇಕಾದ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ದನ ತೋನ್ಸೆ ಹೇಳಿದರು.
ಅವರು ಬ್ರಹ್ಮಾವರ ಬ್ಲಾಕಿನ ಕಲ್ಯಾಣಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಲ್ಯಾಣಪುರ, ಕೆಮ್ಮಣ್ಣು, ಉಪ್ಪೂರು, ಆರೂರುಗಳಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮಾತನಾಡಿ ಕಳೆದ ಐದು ವರ್ಷಗಳಲ್ಲಿ ಮೋದಿ ನೇತೃತ್ವದ ಸರಕಾರ ಜನರನ್ನು ಮರಳು ಮಾಡಿದ್ದು ಬಿಟ್ಟರೆ ಜನರ ಸ್ಥಿತಿಗತಿ ಬದಲಾವಣೆಯ ಕುರಿತು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಅಸಮರ್ಪಕ ನೀತಿಗಳಿಂದಾಗಿ ದೇಶದ ಜನತೆ ಸಮಸ್ಯೆಗಳನ್ನು ಅನುಭವಿಸುತ್ತಿರುವುದಲ್ಲದೆ ಅವರ ಜನಜೀವನವೇ ದುಸ್ತರವಾಗಿದೆ. ಈ ಬಾರಿಯ ಚುನಾವಣೇಯಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಜ್ಜನ ಮತ್ತು ನುಡಿದಂತೆ ನಡೆಯುವ ಪ್ರಮೋದ್ ಮಧ್ವರಾಜ್ ಅವರನ್ನು ಎರಡು ಪಕ್ಷಗಳು ಅಭ್ಯರ್ಥಿಯಾಗಿಸಿದ್ದು ಅವರ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ ಎಂದರು.
ಬ್ರಹ್ಮಾವರ ಬ್ಲಾಕ್ ಚುನಾವಣಾ ಉಸ್ತುವಾರಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಅಭಿವೃದ್ದಿಗೆ ಮತ್ತೊಂದು ಹೆಸರೇ ಪ್ರಮೋದ್ ಮಧ್ವರಾಜ್ ಆಗಿದ್ದು ಅವರ ಅವಧಿಯಲ್ಲಿ ಉಡುಪಿ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿದೆ. ಈ ಭಾಗದ ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಲ್ಲದೆ ಕ್ಷೇತ್ರಕ್ಕೆ ಯಾವುದೇ ರೀತಿಯ ಅನುದಾನ ತರುವಲ್ಲಿ ಪ್ರಯತ್ನ ಕೂಡ ಮಾಡಿಲ್ಲ. ಜನರ ಕೈಗೆ ಸಿಗದೆ ಯಾವುದೇ ಅಭಿವೃದ್ಧಿಪರ ದೃಷ್ಟಿಕೋನವಿಲ್ಲದ ನಿಷ್ಕ್ರೀಯ ಸಂಸದೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಯನ್ನು ಶತಾಯಗತಾಯ ಸೋಲಿಸಿ ನಮ್ಮ ಕ್ರೀಯಾಶೀಲ ಮೈತ್ರಿ ಅಭ್ಯರ್ಥಿಯಾದ ಪ್ರಮೋದ್ ಮಧ್ವರಾಜ್ ಅವರನ್ನು ಗೆಲ್ಲಿಸಿ ಸಂಸದರಾಗಿ ಮಾಡುವಂತೆ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸುವಂತೆ ಕರೆ ನೀಡಿದರು.
ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೆಲಿಯೊ, ಕಲ್ಯಾಣಪುರ ಜಿಪಂ ಕ್ಷೇತ್ರದ ಉಸ್ತುವಾರಿ ರಮೇಶ್ ಶೇಟ್, ಸೂರ್ಯ ಸಾಲಿಯಾನ್, ರಮೇಶ್ ಶೆಟ್ಟಿ ಹಾಗೂ ಇತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.