ಉಡುಪಿ: ಜಾತಿ ನಿಂದನೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಶಿಕ್ಷೆ

Spread the love

ಉಡುಪಿ : ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಡಿ.10ರಂದು ತೀರ್ಪು ನೀಡಿದೆ.

ಬಾರಕೂರು ಹೇರಾಡಿ ರಂಗನಕೆರೆಯ ಪ್ರಸಾದ್ ವಾಸುದೇವ ಆಚಾರ್ಯ (29) ಹಾಗೂ ಪ್ರವೀಶ ವಾಸುದೇವ ಆಚಾರ್ಯ(33) ಎಂಬವರು ಶಿಕ್ಷೆಗೆ ಗುರಿಯಾದ ಆರೋಪಿಗಳು. ಬ್ರಹ್ಮಾವರ ಹೇರಾಡಿ ಗ್ರಾಮದ ರಂಗನಕೆರೆ ಎಂಬಲ್ಲಿ 2009ರ ನ.26ರಂದು ಸಂಜೆ 4ಗಂಟೆಗೆ ಜಾಗದ ತಕರಾರಿಗೆ ಸಂಬಂಧಿಸಿದಂತೆ ಆರೋಪಿಗಳು ಬಾಬು ನಾಯ್ಕ ಎಂಬವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ, ಮರದ ದೊಣ್ಣೆಗಳಿಂದ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದರು. ಆರೋಪಿಗಳ ವಿರುದ್ಧ ಆಗಿನ ಡಿವೈಎಸ್ಪಿ ಜಯಂತ ಶೆಟ್ಟಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು 9 ಸಾಕ್ಷಿಗಳ ವಿಚಾರಣೆ ನಡೆಸಿತು. ನಂತರ ವಾದ-ವಿವಾದಗಳನ್ನು ಆಲಿಸಿ ಅಭಿಯೋಜನೆ ಪ್ರಕರಣದ ಆಪಾದನೆ ಸಾಬೀತಾಗಿದೆ ಎಂದು ನ್ಯಾಯಾಧೀಶ ಶಿವಶಂಕರ್ ಬಿ. ಅಮರಣ್ಣನವರ್ ತೀರ್ಪು ನೀಡಿದ್ದಾರೆ.
ಆರೋಪಿತರಿಗೆ ಭಾರತೀಯ ದಂಡ ಸಂಹಿತೆ ಕಲಂ 447ರಡಿ ಮೂರು ತಿಂಗಳ ಜೈಲುಶಿಕ್ಷೆ ಮತ್ತು 300ರೂ. ದಂಡ, ದಂಡ ನೀಡಲು ತಪ್ಪಿದಲ್ಲಿ 15 ದಿನಗಳ ಜೈಲು ಶಿಕ್ಷೆ, 324ರಡಿ 1 ವರ್ಷ ಶಿಕ್ಷೆ ಮತ್ತು 500ರೂ. ದಂಡ, ದಂಡ ನೀಡಲು ತಪ್ಪಿದಲ್ಲಿ 1 ತಿಂಗಳ ಶಿಕ್ಷೆ, ಕಲಂ 504ರಡಿ 6 ತಿಂಗಳ ಶಿಕ್ಷೆ, ಮತ್ತು 300ರೂ. ದಂಡ, ದಂಡ ನೀಡಲು ತಪ್ಪಿದಲ್ಲಿ ಒಂದು ತಿಂಗಳ ಶಿಕ್ಷೆ, ಕಲಂ 506ರಡಿ ಒಂದು ವರ್ಷ ಶಿಕ್ಷೆ ಮತ್ತು 300ರೂ. ದಂಡ, ದಂಡ ನೀಡಲು ತಪ್ಪಿದಲ್ಲಿ 1 ತಿಂಗಳ ಶಿಕ್ಷೆ, ಕಲಂ 3(1)(ಎಕ್ಸ್) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಂತೆ ಒಂದು ವರ್ಷದ ಶಿಕ್ಷೆಗೆ ಮತ್ತು 300ರೂ. ದಂಡ, ದಂಡ ನೀಡಲು ತಪ್ಪಿದಲ್ಲಿ ಒಂದು ತಿಂಗಳ ಶಿಕ್ಷೆಗೆ ಗುರಿಪಡಿಸಿ ತೀರ್ಪು ನೀಡಲಾಗಿದೆ. ಒಟ್ಟಿಗೆ 1,700ರೂ. ದಂಡ ವಿಧಿಸಲಾಗಿದೆ.

ಇದೇ ಪ್ರಕರಣದಲ್ಲಿ ಆರೋಪಿಗಳು ಬಾಬು ನಾಯ್ಕ ವಿರುದ್ಧ ಪ್ರತಿದೂರನ್ನು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಇದೇ ನ್ಯಾಯಾಲಯದಲ್ಲಿ ನಡೆದಿದ್ದು, ಬಾಬು ನಾಯ್ಕಾರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಉಡುಪಿ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಸ್.ಜಿತೂರಿ ಪ್ರಕರಣವನ್ನು ಮತ್ತು ವಾದವನ್ನು ಮಂಡಿಸಿದ್ದರು.


Spread the love