ಉಡುಪಿ ಜಿಲ್ಲಾ ಗಡಿಯಲ್ಲಿನ ಪ್ರಮುಖ ಚೆಕ್ ಪೋಸ್ಟ್ ಗಳನ್ನು ತೆರವು ಮಾಡಿಲ್ಲ – ಎಸ್ಪಿ ವಿಷ್ಣುವರ್ಧನ್
ಉಡುಪಿ: ಕೊರೋನಾ ಸಂಬಂಧ ಅಂತರ್ ಜಿಲ್ಲೆ, ರಾಜ್ಯದ ಪ್ರಯಾಣಿಕರ ತಪಾಸಣೆಗಾಗಿ ನಿರ್ಮಿಸಿದ ಚೆಕ್ ಪೋಸ್ಟ್ ಗಳನ್ನು ತೆರವು ಮಾಡಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಅಳವಡಿಸಲಾಗಿರುವ ಯಾವುದೇ ಗಡಿ ಭಾಗದ ಚೆಕ್ ಪೋಸ್ಟ್ ಗಳನ್ನು ತೆರವು ಗೊಳಿಸಿಲ್ಲ ಆದರೆ ಅಗತ್ಯವಿರದ ಕೆಲವೊಂದು ಚೆಕ್ ಪೋಸ್ಟ್ ಗಳನ್ನು ವಾರದ ಹಿಂದೆ ಅಂತರ್ ಜಿಲ್ಲೆಗಳ ನಡುವೆ ಸುಗಮ ಸಂಚಾರಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ತೆರವು ಮಾಡಲಾಗಿದೆ.
ಮುಂದೆ ಅಂತರ್ ರಾಜ್ಯ ಸಂಚಾರ ಆರಂಭವಾದಾಗ ಮತ್ತೆ ಪುನಃ ಅಂತಹ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗುವುದು. ಪ್ರಸ್ತುತ ಶೀರೂರು, ಹೆಜಮಾಡಿ, ಸೋಮೇಶ್ವರ, ಕೊಲ್ಲೂರಿನ ದಳಿ, ಹೊಸಂಗಡಿ ಚೆಕ್ ಪೋಸ್ಟ್ ಗಳು ಎಂದಿನಂತೆ ಕಾರ್ಯಚರಿಸುತ್ತಿವೆ. ಅಲ್ಲದೆ ರಾತ್ರಿ ತಪಾಸಣೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯೊಳಗೆ ಕೆಲವು ಚೆಕ್ ಪೋಸ್ಟ್ ಗಳನ್ನು ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.