ಉಡುಪಿ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಆಶ್ರಯದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ
ಉಡುಪಿ: ತಂತ್ರಜ್ಞಾನದ ಬೆಳವಣಿಗೆಯಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಒಂದೇ ನಿಮಿಷದಲ್ಲಿ ಚಿತ್ರಗಳು ನಮಗೆ ಲಭಿಸುತ್ತದೆ ಎಂದು ಉಡುಪಿಯ ಹಿರಿಯ ಛಾಯಾಗ್ರಹಕ ಜಯಕರ ಸುವರ್ಣ ಹೇಳಿದರು.
ಸುಮಾರು 20 ಕ್ಕಿಂತಲೂ ಹೆಚ್ಚು ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಅಂದಿನ ದಿನಗಳ ಕಪ್ಪು ಬಿಳುಪಿನ ಛಾಯಾಗ್ರಹಣ ಬಹಳ ಕಷ್ಟದ ಕೆಲಸವಾಗಿದ್ದರೆ ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಬದಲಾವಣೆಯಲ್ಲಿ ಛಾಯಾಗ್ರಹಣ ಕ್ಷೇತ್ರ ಬದಲಾವಣೆ ಕಂಡಿದೆ ಎಂದರು. ಛಾಯಾಗ್ರಹಣ ಮತ್ತು ಪತ್ರಿಕೋದ್ಯಮಕ್ಕೆ ಅನನ್ಯ ಸಂಬಂಧವಿದ್ದು ಸಮಾಜದ ಮಹತ್ವದ ಕ್ಷಣ ಹಾಗೂ ವ್ಯಕ್ತಿಯೊಬ್ಬರ ಸಂತಸದ ಕ್ಷಣಗಳನ್ನು ಚಿತ್ರಗಳ ಮೂಲಕ ಹಿಡಿದಿಡುವುದು ವೃತ್ತಿಯ ವಿಶೇಷತೆಯಾಗಿದೆ. ಪತ್ರಿಕಾ ಛಾಯಾಗ್ರಾಹಕರು, ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ ಎಂದರು.
ಇದೇ ವೇಳೆ ಪತ್ರಿಕಾ ಛಾಯಾಗ್ರಾಹಕರು ಹಾಗೂ ವರದಿಗಾರರಾದ ದಿವಾಕರ ಹಿರಿಯಡ್ಕ, ಪ್ರಸನ್ನ ಕೊಡವೂರು, ಸುಭಾಶ್ಚಂದ್ರ ವಾಗ್ಳೆ, ನಝೀರ್ ಪೊಲ್ಯ, ಚೇತನ್ ಮಟಪಾಡಿ, ಸೂರಜ್ ಸಾಲಿಯಾನ್, ಪಲ್ಲವಿ ಸಂತೋಷ್ ಅವರು ತಾವು ಸೆರೆ ಹಿಡಿದ ಚಿತ್ರಗಳ ಪ್ರದರ್ಶನ ನಡೆಸಿದರಲ್ಲದೆ ತಮ್ಮ ವೃತ್ತಿಜೀವನದ ಅನುಭವಗಳನ್ನು ಛಾಯಾಗ್ರಾಹಕರೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣೇಶ ಪ್ರಸಾದ ಪಾಂಡೇಲು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕಾರ್ಯಕಾರಿ ಸಮಿತಿ ಸದಸ್ಯ ಪುಂಡಲೀಕ ಮರಾಠೆ, ಪ್ರೆಸ್ ಕ್ಲಬ್ ಸಹಸಂಚಾಲಕ ಸುಭಾಶ್ಚಂದ್ರ ವಾಗ್ಳೆ, ಕೋಶಾಧಿಕಾರಿ ದಿವಾಕರ ಹಿರಿಯಡ್ಕ ಉಪಸ್ಥಿತರಿದ್ದರು.