ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಬಡಕುಟುಂಬಕ್ಕೆ ಉಚಿತ ಮನೆ
ಉಡುಪಿ: ಇಂದಿರಾ ಗಾಂಧಿಯವರ ಜನ್ಮ ಶತಮಾನೋತ್ಸವ ಪ್ರಯುಕ್ತ ಅಚ್ಲಾಡಿ-ಮಧುವನದ ಬಡಕುಟುಂಬದವರಾದ ಜಲಜ ಪಾಣ ಅವರಿಗೆ ಮಹಿಳಾ ಕಾಂಗ್ರೆಸ್ ಉಡುಪಿ ಜಿಲ್ಲೆ ನೇತೃತ್ವದಲ್ಲಿ, ದಾನಿಗಳ ಸಹಕಾರದೊಂದಿಗೆ ನಿರ್ಮಿಸಿಕೊಟ್ಟ ನೂತನ ಗೃಹ `ಇಂದಿರಾ ಮನೆಯ‘ ಹಸ್ತಾಂತರ ಕಾರ್ಯಕ್ರಮ ಗುರುವಾರ ಜರುಗಿತು.
ಮನೆಯನ್ನು ಹಸ್ತಾಂತರಿಸಿ ಮಾತನಾಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸರಕಾರಿ ಜಾಗದಲ್ಲಿ ಬಡವರಿಗೆ ಹಕ್ಕು ನೀಡಿದ ಈ ದೇಶದ ಮೊದಲ ಧೀಮಂತ ಪ್ರಧಾನಿ ಇಂದಿರಾಗಾಂಧಿ ಆಗಿದ್ದು ಅವರ ಆಡಳಿತಾವಧಿಯಲ್ಲಿ ಭಾರತ ಅರ್ಥಿಕವಾಗಿ ಹಿಂದುಳಿದಿದ್ದರು ದೇಶಕ್ಕೆ ಹೊಸ ಶಕ್ತಿಯಾಗಿ ಹೊರಹೊಮ್ಮಿತು. ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಇದುವರೆಗೆ 70 ಬಡಕುಟುಂಬಗಳಿಗೆ ದಾನಿಗಳ ಸಹಕಾರದೊಂದಿಗೆ ಮನೆ ನಿರ್ಮಿಸಿ ಕೊಡಲಾಗಿದೆ ಹಾಗೂ ಅನೇಕ ಉತ್ತಮ ಕೆಲಸಗಳನ್ನು ಮಾಡಲಾಗಿದೆ. ಆದರೆ ಕೆಲವರು ಟೀಕೆಗಾಗಿ ನಮ್ಮ ಕಾರ್ಯವನ್ನು ಟೀಕಿಸುವವರಿದ್ದಾರೆ. ಇದಕ್ಕೆಲ್ಲ ಹೆದರಿ ಅಭಿವೃದ್ಧಿ ಕಾರ್ಯದ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕ ಕರ್ನೆಲಿಯೋ ಇನ್ನು ಮುಂದೆ ಪ್ರತಿ ವರ್ಷ ಬಡ ಕುಟುಂಬವೊಂದನ್ನು ಗುರುತಿಸಿ ದಾನಿಗಳ ನೆರವಿನೊಂದಿಗೆ ಉಚಿತ ಮನೆ ನಿರ್ಮಿಸಿಕೊಡುವ ಗುರಿ ಮಹಿಳಾ ಕಾಂಗ್ರೆಸ್ ಹೊಂದಿದೆ. ಇದಕ್ಕೆ ದಾನಿಗಳ ಸಹಕಾರ ಅಗತ್ಯ ಎಂದು ಹೇಳಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಎಂ.ಎ.ಗಪೂರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜರ್ನಾಧನ ತೋನ್ಸೆ, ಮುಖಂಡರಾದ ಮುನಿಯಾಳು ಉದಯ ಕುಮಾರ್ ಶೆಟ್ಟಿ, ಇಬ್ರಾಹಿಂ ಸಾಹೇಬ್ ಹಂಗಾರಕಟ್ಟೆ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಶಂಕರ್ ಕುಂದರ್, ಶ್ಯಾಮಲ ಭಂಡಾರಿ, ರೋಶಿನಿ ವಲ್ವೇರ, ಡಾ| ಸುನಿತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ಕೋಟ ಬ್ಲಾಕ್ ವ್ಯಾಪ್ತಿಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಸರಳಾ ಕಾಂಚನ್, ವಡ್ಡರ್ಸೆ ಗ್ರಾ.ಪಂ. ಅಧ್ಯಕ್ಷೆ ಹೇಮ, ಕೋಟ ಸಿ.ಎ.ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಜಿ.ಪಂ. ಮಾಜಿ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು.