ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ “ಮಾಧ್ವ ಟ್ರೋಫಿ-2017” ಉದ್ಘಾಟನೆ
ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಆಯ್ದ ವಿಪ್ರ ತಂಡಗಳ ಕ್ರಿಕೆಟ್ ಪಂದ್ಯಾವಳಿಯನ್ನು ಪರ್ಯಾಯ ಶ್ರೀ ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಚಿಟ್ಪಾಡಿ ಮಹಾತ್ಮಾ ಗಾಂಧಿ ಬಯಲು ರಂಗ ಮಂದಿರದಲ್ಲಿ ಉದ್ಘಾಟನೆ ಮಾಡಿದರು.
ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಆಚಾರ್ಯ ಮಧ್ವರು ಆಧ್ಯತ್ಮಿಕ ಚಿಂತನೆ ಮಾತ್ರವಲ್ಲದೆ ಆಟೋಟದಲ್ಲಿಯೂ ಎತ್ತಿದ ಕೈ.ವಾಯು ದೇವರ ಮೂರೂ ಅವತಾರಗಳಾದ ಹನುಮ ಭೀಮ ಮಧ್ವರು ಮಾನಸಿಕ ಮಾತ್ರವಲ್ಲದೆ ದೈಹಿಕವಾಗಿಯೂ ಸಾಧನೆ ಮಾಡಿ ಸಮಾಜಕ್ಕೆ ತೋರಿಸಿದ್ದಾರೆ. ವಿಪ್ರ ಯುವಕರನ್ನು ಒಂದೇ ಕಡೆ ಸೇರಿಸಲುಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಒಳ್ಳೆಯ ಅವಕಾಶ ಮಾಡಿಕೊಟ್ಟಿದೆ ಪರಿಷತ್ತಿನಿಂದ ಒಳ್ಳೆಯ ಸಮಾಜಮುಖಿ ಕಾರ್ಯ ನಡೆಯುತ್ತಿರಲಿ ಎಂದು ಆಶೀರ್ವಚನ ನೀಡಿದರು. .
ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಮಧ್ವರ ಹೆಸರಿನಲ್ಲಿ ಆಯೋಜಿಸಿರುವ ಈ ಪಂದ್ಯಾವಳಿಯು ಆಚಾರ್ಯರು ತಿಳಿಸಿದಂತೆ ದೇಹ ಮತ್ತು ಬುದ್ಧಿ ಗಳಿಗೆ ಒಳ್ಳೆಯ ಉತ್ತೇಜನ ನೀಡುತ್ತದೆ.ಶಾರೀರಿಕವಾಗಿ ಸದೃಢ ಇದ್ದರೆ ಸಾಧನೆ ಮಾಡಲು ಬಹಳ ಸುಲಭವಾಗುತ್ತದೆ.ಈ ಉದ್ದೇಶಕ್ಕಾಗಿ ಕ್ರೀಡೆ ಸಹಕಾರಿಯಾಗುತ್ತದೆ.ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನವರು ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಯಶಸ್ವಿಯಾಗಲಿ ಎಂದು ಅನುಗ್ರಹಿಸಿದರು.
ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರಿನ ಶಾರದಾ ವಿದ್ಯಾಲಯದ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್,ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರಾದ ಮಂಜುನಾಥ ಉಪಾಧ್ಯ,ಹಿರಿಯ ವಕೀಲರಾದ ಎ.ಶ್ರೀಪತಿ ಆಚಾರ್ಯ,ಕರ್ನಾಟಕ ಬ್ಯಾಂಕಿನ ಉಪಮಹಾಪ್ರಭಂದಕರಾದ ಶ್ರೀಮತಿ ವಿದ್ಯಾಲಕ್ಷ್ಮಿ.ಆರ್, ಉಡುಪಿ ತಾಲೂಕು ಪಂಚಾಯತಿನ ಅಧ್ಯಕ್ಷೆ ಶ್ರೀಮತಿ ನಳಿನಿ ಪ್ರದೀಪ್ ರಾವ್, ಉಡುಪಿ ಟೌನ್ ಕೋ.ಬ್ಯಾಂಕಿನ ಅಧ್ಯಕ್ಷರಾದ ಕೃಷ್ಣರಾಜ ಸರಳಾಯ ಭಾಗವಹಿಸಿ ಶುಭ ಹಾರೈಸಿದರು.
ಶುಭ ಉಲ್ಲಾಸ್ ಕಾರ್ಯಕ್ರಮ ನಿರ್ವಹಿಸಿದರು, ಪರಿಷತ್ತಿನ ಅಧ್ಯಕ್ಷ ವಿಷ್ಣುಪ್ರಸಾದ್ ಪಾಡಿಗಾರ್ ಸ್ವಾಗತಿಸಿ, ಪರಿಷತ್ತಿನ ಕಾರ್ಯದರ್ಶಿ ಪ್ರವೀಣ್ ಉಪಾಧ್ಯ ಧನ್ಯವಾದ ನೀಡಿದರು.
ನಂತರ ಮೈದಾನದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬ್ಯಾಟ್ ಹಿಡಿದು ಕ್ರಿಕೆಟ್ ಆಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಸಂಘಟಿಸಿದ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶಶಿಧರ ಭಟ್ ಹಾಗೂ ಮಟ್ಟಿ ಲಕ್ಷ್ಮೀನಾರಾಯಣ ರಾವ್ ಉಪಸ್ಥಿತರಿದ್ದರು.