ಉಡುಪಿ ಜಿಲ್ಲಾ ವಾರ್ತಾ ಕಚೇರಿಗೆ ಆಯುಕ್ತ ಡಾ.ಪಿ.ಎಸ್ ಹರ್ಷ ಭೇಟಿ
ಉಡುಪಿ : ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ.ಪಿ.ಎಸ್ ಹರ್ಷ ಅವರು ಇಂದು ಉಡುಪಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಕರ ಕಚೇರಿಗೆ ಭೇಟಿ ನೀಡಿ, ಕಡತಗಳ ಪರಿಶೀಲನೆ ನಡೆಸಿದರು.
ವಾರ್ತಾ ಇಲಾಖೆಯು ಈ ಹಿಂದೆ ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಪ್ರಚಾರ ಪಡಿಸುತ್ತಿದ್ದು, ಆದರೆ ಪ್ರಸ್ತುತ ದಿನಗಳಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಕೊಂಡಿಯಾಗಿಯೂ ಕಾರ್ಯ ನಿರ್ವಹಿಸಬೇಕಾಗಿದ್ದು, ಅತ್ಯಂತ ಜವಾಬ್ದಾರಿಯುತವಾಗಿ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಕಚೇರಿ ಸಮಯದ ಹೊರತಾಗಿಯೂ ಕಾರ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು.
ಕಚೇರಿಯ ಎಲ್ಲಾ ಸಿಬ್ಬಂದಿಗಳು ತಮ್ಮ ದೈನಂದಿನ ಕರ್ತವ್ಯದ ಜೊತೆಗೆ ಕಚೇರಿಯ ಇನ್ನಿತರ ಕಾರ್ಯಗಳನ್ನೂ ಸಹ ತಮ್ಮ ಕರ್ತವ್ಯ ಎಂದು ಭಾವಿಸಿ ತಪ್ಪದೇ ಮಾಡಬೇಕು ಎಂದರು.
ಪ್ರಸ್ತುತ ದಿನಗಳಲ್ಲಿ ಜನಸಾಮಾನ್ಯರು ಆಧುನಿಕ ಡಿಜಿಟಲ್ ಮಾಧ್ಯಮಗಳಿಗೆ ಮಾರು ಹೋಗುತ್ತಿರುವ ಹಿನ್ನಲೆಯಲ್ಲಿ , ನಮ್ಮ ಇಲಾಖೆಯ ಸಾಂಪ್ರದಾಯಿಕ ಸುದ್ದಿ ಹಾಗೂ ಸರ್ಕಾರದ ಕಾರ್ಯಕ್ರಮಗಳ ಪ್ರಚಾರದ ಜೊತೆಗೆ ಸಾಮಾಜಿಕ ಮಾಧ್ಯಮಗಳ ಮೂಲಕವೂ ಪ್ರಚಾರ ಪಡಿಸಬೇಕು ಎಂದರು.
ಕಚೇರಿಯಲ್ಲಿ ಯಾವುದೇ ರೀತಿಯ ಕಾರ್ಯಗಳನ್ನು ನಿರ್ವಹಿಸುವಾಗ ನಿಖರ ಮಾಹಿತಿಯನ್ನು ತಪ್ಪದೇ ನಮೂದು ಮಾಡಬೇಕು ತಪ್ಪಿದಲ್ಲಿ ಅವು ಮುಂದಿನ ದಿನಗಳಲ್ಲಿ ಸಮಸ್ಯೆಯೊಡ್ಡುವ ಸಾಧ್ಯತೆಗಳಿದ್ದು, ಇದಕ್ಕೇ ಆಸ್ಪದ ನೀಡಬಾರದು ಎಂದರು.
ಇದೇ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುತ್ತಿರುವ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ಗಳನ್ನು ವಿತರಿಸಿ ಅವರೊಂದಿಗೆ ಮಾತನಾಡಿ, ಅವರುಗಳ ಸಮಸ್ಯೆ ಸೇರಿದಂತೆ ಮತ್ತಿತರ ಸಲಹೆಗಳನ್ನು ಆಲಿಸಿ ಮಾತನಾಡಿ, ಸರ್ಕಾರ ಪತ್ರಕರ್ತರ ಕಲ್ಯಾಣಾಭಿವೃಧ್ದಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ ಇವುಗಳನ್ನು ಅರ್ಹ ಪತ್ರಕರ್ತರಿಗೆ ತಲುಪಿಸುವ ಜವಾಬ್ದಾರಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ತಪ್ಪದೇ ಅನುಷ್ಠಾನಗೊಳಿಸಬೇಕು ಎಂದರು.
ಮಾಧ್ಯಮ ಮಾನ್ಯತೆ ಕಾರ್ಡ್ ಸೇರಿದಂತೆ ಆರೋಗ್ಯ ಕಾರ್ಡ್ ಸಹ ಎಲ್ಲಾ ಪತ್ರಕರ್ತರಿಗೂ ಲಭ್ಯವಾಗಬೇಕು ಎಂಬ ಮನವಿಗೆ ಸ್ಪಂದಿಸಿದ ಅವರು, ಪತ್ರಿಕೆಯ ಮಾಲೀಕರು ತಮ್ಮ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಿದಲ್ಲಿ ನಿಯಮಾನುಸಾರ ಅವರುಗಳಿಗೆ ಮಾಧ್ಯಮ ಮಾನ್ಯತೆ ಕಾರ್ಡ್ ಮತ್ತಿತರ ಸೌಲಭ್ಯ ನೀಡಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪತ್ರಿಕಾ ಭವನಕ್ಕೆ ಭೇಟಿ ನೀಡಿದ ಆಯುಕ್ತರು, ಭವನದ ಪರಿಶೀಲನೆ ನಡೆಸಿದರು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.