ಉಡುಪಿ ಜಿಲ್ಲೆಗೆ ಆಗಮಿಸುವ ಅಮಿತ್ ಶಾ ಜನರ ಪ್ರಶ್ನೆಗಳಿಗೆ ಉತ್ತರಿಸಿಲಿ; ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ವಿಶ್ವಾಸ್ ಶೆಟ್ಟಿ
ಉಡುಪಿ: ಉಡುಪಿ ಜಿಲ್ಲೆಗೆ ಆಗಮಸತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬಿಜೆಪಿ ಲೋಕಸಭಾ ಚುನಾವಣೆಯ ಮೊದಲು ನೀಡಿದ ಭರವಸೆಗಳ ಕುರಿತು ಜನತೆಯ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸ ಮಾಡಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ವಿಶ್ವಾಸ್ ಶೆಟ್ಟಿ ಆಗ್ರಹಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಮಿತ್ ಶಾ ತಮ್ಮ ಪುತ್ರ ಜೈ ಶಾ ಅವರ ಅಕ್ರಮ ಆಸ್ತಿ ಗಳಿಕೆಯ ತನಿಖೆಯನ್ನು ಯಾವಾಗ ಮಾಡುವುದು ಮತ್ತು ಲೋಕಸಭಾ ಚುನಾವಣಾ ವೇಳೆ ನೀಡಿದ ಆಶ್ವಾಸನೆಯಂತೆ ಎರಡು ಲಕ್ಷ ಉದ್ಯೋಗ ಸೃಷ್ಟಿ ಎಲ್ಲಿ ಮಾಡಿದ್ದೀರಿ ಎಂಬುದರ ಕುರಿತು ಅಮಿಶಾ ಷಾ ಜನತೆ ಉತ್ತರ ನೀಡಲಿ. ಪಿಎನ್ ಬಿ ಹಗರಣದ ನೀರವ್ ಮೋದಿಯ 11 ಸಾವಿರ ಕೋಟಿ ಮತ್ತು ವಿಜಯ್ ಮಲ್ಯ 9 ಸಾವಿರ ಕೋಟಿ ಭ್ರಷ್ಟಾಚಾರ, ಕಪ್ಪು ಹಣದ ಕುರಿತು ನೀಡಿದ ಆಶ್ವಾಸನೆ, ದೇಶದ ಗಡಿ ಹಾಗೂ ಸೈನಿಕರ ಸಮಸ್ಯೆ, ಲೋಕಪಾಲ್ ಬಿಲ್ ಅನುಷ್ಠಾನದ ಬಗ್ಗೆ ಅಮಿತ್ ಶಾ ಮೌನ ಮುರಿಯಬೇಕಾಗಿದೆ ಎಂದರು.
ಉಡುಪಿ-ಆಗುಂಬೆ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಮತ್ತು ಮಂಗಳೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬದ ಬಗ್ಗೆ ಅವರು ಉತ್ತರಿಸಲಿ ಎಂದ ವಿಶ್ವಾಸ್ ಶೆಟ್ಟಿ, ಉಡುಪಿ ಸಂಸದರು ತನ್ನ ಕ್ಷೇತ್ರದ ಜನರ ಸಮಸ್ಯೆ ಮತ್ತು ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಜನರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಂಸದರು ಕೈಗೆ ಸಿಗುತ್ತಿಲ್ಲ ಅಡಿಕೆ ಸುಪಾರಿ ನಿಷೇಧಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿದರೂ ಇಲ್ಲಿನ ಸಂಸದರು ಬಾಯಿ ಬಿಡುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಐಟಿ ಸೆಲ್ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹರೀಶ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ದೀನೇಶ್ ನಾಯ್ಕ್ ಉಪಸ್ಥಿತರಿದ್ದರು.