ಉಡುಪಿ ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ಪ್ರಾರಂಭಕ್ಕೆ ಯತ್ನ- ಶೋಭಾ ಕರಂದ್ಲಾಜೆ 

Spread the love

ಉಡುಪಿ ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ಪ್ರಾರಂಭಕ್ಕೆ ಯತ್ನ- ಶೋಭಾ ಕರಂದ್ಲಾಜೆ 

ಉಡುಪಿ: ಜಿಲ್ಲೆಯಲ್ಲಿನ ಕಾರ್ಮಿಕರ ಮತ್ತು ಅವರ ಕುಟುಂಬದವರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರದ ನೆರವಿನಿಂದ ಇಎಸ್ಐ ಆಸ್ಪತ್ರೆ ಪ್ರಾರಂಭಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುವುದಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಅವರು ಶುಕ್ರವಾರ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಉಡುಪಿ ಜಿಲ್ಲೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಸಹಯೋಗದಲ್ಲಿ, ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಕಾರ್ಮಿಕ ಸಮ್ಮಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಿಸಲು ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸದ ಹೊರತು ಕೇಂದ್ರದಿಂದ ಮಂಜೂರಾತಿ ದೊರೆಯುವುದಿಲ್ಲ. ಆದ್ದರಿಂದ ಉಡುಪಿ ಜಿಲ್ಲೆಯಲ್ಲಿನ ಕಾರ್ಮಿಕರ ಸಂಖ್ಯೆ ಮತ್ತು ಇಎಸ್ಐ ಆಸ್ಪತ್ರೆಯ ಅಗತ್ಯತೆ ಕುರಿತಂತೆ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಸಲ್ಲಿಕೆಯಾಗುವ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದಲ್ಲಿ ತಾವು ಮಂಜೂರು ಮಾಡಿಸುವುದಾಗಿ ತಿಳಿಸಿದರು.

ಪ್ರಸ್ತುತ ರಾಜ್ಯ ಸರ್ಕಾರದಲ್ಲಿ 14 ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಲಾಗಿದೆ, ಆದರೆ ಗೇರು ಬೀಜ ಕಾರ್ಖಾನೆ, ಕೃಷಿ ಕಾರ್ಮಿಕರು ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರನ್ನೂ ಸಹ ಈ ವಲಯಕ್ಕೆ ಸೇರಿಸಿ ಅವರಿಗೆ ಅಗತ್ಯ ಸೌಲಭ್ಯಗಳನ್ನು ದೊರಕಿಸುವ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರಬೇಕು, ಎಲ್ಲಾ ಕಾರ್ಮಿಕರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಪ್ರತಿ ವರ್ಷ ಉಚಿತ ಆರೋಗ್ಯ ತಪಾಸಣೆ ನಡೆಸಬೇಕು, ಕಾರ್ಮಿಕರಿಗೆ ಜಾರಿಗೆ ತಂದಿರುವ ಪಿಂಚಣಿ ಯೋಜನೆಯ ಪ್ರಯೋಜನವನ್ನು ಹಾಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಾರ್ಮಿಕರಿಗೆ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಕಾರ್ಮಿಕರು ಪಡೆಯಬೇಕು ಎಂದು ಹೇಳಿದರು.

ವಿವಿಧ ವೃತ್ತಿ/ಕೆಲಸದಲ್ಲಿ ಸಾಧನೆ ಮಾಡಿದ 12 ಮಂದಿ ಕಾರ್ಮಿಕರಿಗೆ ವಿಶೇಷ ಪುರಸ್ಕರ ಹಾಗೂ 96 ಮಂದಿಗೆ ಶ್ರಮ ಸನ್ಮಾನ ಪ್ರಶಸ್ತಿಯನ್ನು ಸಂಸದರು ವಿತರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕುಂದಾಪುರ ವಲಯದ ಕಾರ್ಮಿಕ ನಿರೀಕ್ಷಕ ಸತ್ಯ ನಾರಾಯಣ, ಉಡುಪಿ ಜಿಲ್ಲೆಯಲ್ಲಿ 26922 ಪುರುಷರು ಮತ್ತು 4344 ಮಹಿಳೆಯರು ಸೇರಿದಂತೆ 21266 ಅಸಂಘಟಿತ ಕಾರ್ಮಿಕರು ನೊಂದಣಿಯಾಗಿದ್ದು, ನೊಂದಾಯಿಸಿಕೊಂಡ ಎಲ್ಲಾ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ, ಕಾರ್ಮಿಕರಿಗೆ ವಿವಿಧ ಯೋಜನೆಯಡಿ ಧನ ಸಹಾಯ ನೀಡುತ್ತಿದ್ದು, ಇದುವರೆಗೆ 12370 ಫಲಾನುಭವಿಗಳಿಗೆ 12 ಕೋಟಿ 49 ಲಕ್ಷಗಳ ಧನ ಸಹಾಯ ನೀಡಲಾಗಿದೆ, ಸಾಮಾಜಿಕ ಭದ್ರತೆಯಡಿ ಅಪಘಾತದಿಂದ ಮೃತಪಟ್ಟರೆ 5 ಲಕ್ಷ ಪರಿಹಾರ ಮತ್ತು ಶಾಶ್ವತ ಅಂಗವಿಕಲನಾದರೆ 2 ಲಕ್ಷ ಪರಿಹಾರ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಎಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ ಸ್ವಾಗತಿಸಿದರು, ಕಾರ್ಮಿಕ ಇಲಾಖೆಯ ಪ್ರವೀಣ್ ವಂದಿಸಿದರು, ಶಿಕ್ಷಕ ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.


Spread the love